ಬೆಂಗಳೂರು,ಮೇ19- ಸೈಬರ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಉದ್ದೇಶಕ್ಕಾಗಿ ವಿದೇಶಗಳಿಗೆ ಕಾನೂನು ಬಾಹಿರವಾಗಿ ಸಿಮ್ ಕಾರ್ಡ್‌ಗಳನ್ನು ಕಳುಹಿಸುತ್ತಿದ್ದ ಜಾಲವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಠಾಣೆ ಪೊಲೀಸರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ನಿವಾಸಿಯೊಬ್ಬನನ್ನು ಬಂಧಿಸಲಾಗಿದೆ.
ಅಂತಾರಾಷ್ಟ್ರೀಯ ಕೊರಿಯರ್ ಸಂಸ್ಥೆಗಳ ಮೂಲಕ ದೇಶದ ವಿವಿಧ ಭಾಗಗಳಿಂದ ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸಿ ಕಳ್ಳಸಾಗಾಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು, ಶ್ರೀನಿವಾಸ್ ರಾವ್ ಹೆಸರಿನಲ್ಲಿ ಥೈವಾನ್‌ಗೆ ಬುಕ್ ಆಗಿದ್ದ ಪಾರ್ಸಲ್‌ನಲ್ಲಿ 24 ಸಿಮ್ ಕಾರ್ಡ್‌ಗಳು ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು.
ಅದೇ ರೀತಿ ಚೆನ್ನೈ ಮೂಲದ ಸಯ್ಯದ್ ಎಂಬಾತನ ಹೆಸರಿನಲ್ಲಿ ಬುಕ್ ಆಗಿದ್ದ ಪಾರ್ಸಲ್‌ನಲ್ಲಿ 114 ಸಿಮ್‌ಗಳನ್ನು ಬಚ್ಚಿಡಲಾಗಿತ್ತು. ಇದು ಕಾಂಬೋಡಿಯ ದೇಶದಲ್ಲಿನ ವಿಳಾಸವೊಂದಕ್ಕೆ ಕಳುಹಿಸಲಾಗುತಿತ್ತು ಎಂದು ತಿಳಿದುಬಂದಿದೆ.ಈ ಪ್ರಕರಣ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರಸಂಪರ್ಕ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ದೆಹಲಿ ಪೊಲೀಸರು ಈ ವರ್ಷದ ಮಾರ್ಚ್‌ನಲ್ಲಿ ವಿಯಟ್ನಾಂಗೆ ಪ್ರತಿ ತಿಂಗಳು ನೂರಾರು ಸಿಮ್ ಕಾರ್ಡ್‌ಗಳನ್ನು ಕಳುಹಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಗುಜರಾತ್‌ನ ಸೂರತ್ ಪೊಲೀಸರು ಇಬ್ಬರನ್ನು ಬಂಧಿಸಿ ದುಬೈಗೆ ಕಳುಹಿಸಲಾಗುತ್ತಿದ್ದ 192 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು.