ಬೆಂಗಳೂರು,ಫೆ.6-ಹೊಸ ಏರ್ಪೋರ್ಟ್ ನಿರ್ಮಿಸಲು 4,400 ಎಕರೆ ಜಾಗದ ಅಗತ್ಯವಿದ್ದು, ನಾನಾ ರೀತಿಯ ತಾಂತ್ರಿಕ ಕಾರಣಗಳು ಇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣ ಕುರಿತಂತೆ ನಾವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಭಾರತೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ ತೆಗೆದುಕೊಳ್ಳಬೇಕು. ಜೊತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಜೊತೆ ಕರಾರು ಇದೆ. ಆ ಅವಧಿ ಮುಗಿದ ಬಳಿಕವೇ ಹೊಸ ವಿಮಾನನಿಲ್ದಾಣ ನಿರ್ಮಾಣ ಮಾಡಲು ಸಾಧ್ಯ. ಹೊಸ ವಿಮಾನನಿಲ್ದಾಣ ಬಿಡದಿ, ತುಮಕೂರು, ಸೋಲೂರು, ನೆಲಮಂಗಲ ಸೇರಿ ಎಲ್ಲಿ ನಿರ್ಮಾಣ ಆಗಬೇಕು ಎಂಬುದನ್ನು ಪ್ರಾಧಿಕಾರವೇ ನಿರ್ಧರಿಸಬೇಕು ಎಂದರು.
ವಿಮಾನನಿಲ್ದಾಣ ನಿರ್ಮಾಣಕ್ಕೆ ನಾನಾ ರೀತಿಯ ಷರತ್ತುಗಳಿವೆ. ಸುಮಾರು 4,400 ಎಕರೆ ಜಾಗ ಬೇಕು. ಬೆಟ್ಟಗುಡ್ಡಗಳಿರಬಾರದು. ವಿಮಾನಗಳು ಹಾರಾಡಲು ಮುಕ್ತ ವಾತಾವರಣ ಇರಬೇಕು. ಇರುವ ವಿಮಾನನಿಲ್ದಾಣದಿಂದ 40 ಕಿ.ಮೀ. ಅಂತರದಲ್ಲಿರಬೇಕು ಎಂಬೆಲ್ಲಾ ಷರತ್ತುಗಳಿವೆ. ಈ ತಾಂತ್ರಿಕ ಅಂಶಗಳನ್ನು ಆಧರಿಸಿ ಅಧಿಕಾರಿಗಳು ಕಾರ್ಯಸಾಧುತ್ವ ವರದಿಯನ್ನು ತಯಾರಿಸುತ್ತಾರೆ ಎಂದು ಹೇಳಿದರು.
ಎಲ್ಲರಿಗೂ ತಮ ಜಮೀನಿನ ಬಳಿಯೇ ವಿಮಾನನಿಲ್ದಾಣವಾಗಬೇಕು ಎಂಬ ಆಸೆಗಳಿರುತ್ತವೆ. ಆದರೆ ನಾವು ಅಂದುಕೊಂಡಂತೆ ಆಗುವುದಿಲ್ಲ. ತಾಂತ್ರಿಕ ಅಂಶಗಳನ್ನು ಆಧರಿಸಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ನಮ ಅಧಿಕಾರಿಗಳು ಅದರಲ್ಲೂ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ನಿರಂತರ ಪರಿಶೀಲನೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿ ನಂತರ ದೆಹಲಿಯಿಂದ ಅನುಮತಿ ಪಡೆದು ಕಾರ್ಯಾರಂಭ ಮಾಡಲಿದ್ದಾರೆ ಎಂದರು.ಕೇಂದ್ರ ಸಚಿವ ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಈ ವಿಚಾರದಲ್ಲಿ ಏನೂ ಮಾಡಲಿಲ್ಲ. ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಈಗ ಬಿಡದಿ ಬಳಿ ವಿಮಾನನಿಲ್ದಾಣ ನಿರ್ಮಾಣವಾಗಬೇಕೆಂದು ಹೇಳುತ್ತಿದ್ದಾರೆ. ಇದಕ್ಕೂ ಮೊದಲು ಮೇಕೆದಾಟು ಯೋಜನೆಗೆ ಪ್ರಧಾನಿ ಬಳಿ 24 ಗಂಟೆಯೊಳಗೆ ಸಹಿ ಹಾಕಿಸುತ್ತೇನೆ ಎಂದಿದ್ದರು. ಮೊದಲು ಆ ಕೆಲಸ ಮಾಡಿಸಿ ಎಂದು ಸವಾಲು ಹಾಕಿದರು.
ಚಿತ್ರನಟ ಸುದೀಪ್ ಇಂದು ತಮನ್ನು ಭೇಟಿಯಾಗಿದ್ದು ವೈಯಕ್ತಿಕ ಸಮಸ್ಯೆಯ ಕಾರಣಕ್ಕೆ. ಅವರ ಚಿತ್ರದ ಶೂಟಿಂಗ್ಗೆ ಬೇರೆ ಯಾವುದೋ ಸಮಸ್ಯೆಯಿತ್ತು. ಅದನ್ನು ಬಗೆಹರಿಸಲು ತಮ ಬಳಿ ಬಂದಿದ್ದರು. ನಾನೂ ಕೂಡ ಅಗತ್ಯ ಇರುವವರಿಗೆ ಕರೆ ಮಾಡಿ ಸೂಚನೆ ನೀಡಿದ್ದೇನೆ ಎಂದರು.
ಸುದೀಪ್ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ನಾವೇನೂ ರಾಜಕೀಯ ಮಾತನಾಡಿಲ್ಲ ಎಂದು ಹೇಳಿದರು.
ಹಿಂದು ಎನ್ನುವ ಪದವನ್ನು ತಂದಿದ್ದೇ ಕಾಂಗ್ರೆಸ್ ಪಕ್ಷ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು.ಮೈಕ್ರೋ ಫೈನಾನ್‌್ಸ ಸಂಸ್ಥೆಗಳ ಕಿರುಕುಳವನ್ನು ತಪ್ಪಿಸಲು ರಾಜ್ಯ ಸರ್ಕಾರ ರೂಪಿಸಿರುವ ಸುಗ್ರೀವಾಜ್ಞೆಯನ್ನು ಅಂತಿಮಗೊಳಿಸಲಾಗಿದ್ದು, ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಕಳುಹಿಸಲಿದ್ದಾರೆ. ಅವರ ಸಹಿಯಾದ ಬಳಿಕ ಜಾರಿಯಾಗಲಿದೆ ಎಂದರು.
ದೆಹಲಿ ವಿಧಾನಸಭಾ ಚುನಾವಣೆಯ ಕುರಿತಂತೆ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆಯಿಲ್ಲ. ಮತದಾರ ಏನು ತೀರ್ಪು ಕೊಟ್ಟಿರುತ್ತಾರೋ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಅವರಿಗೆ ಬಿಟ್ಕಾಯಿನ್ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟೀಸ್ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ರವರು ನಿಯಮಾನುಸಾರ ತನಿಖೆ ನಡೆಯಲಿದೆ ಎಂದು ಹೇಳಿದರು.