Thursday, December 5, 2024
Homeರಾಜಕೀಯ | Politicsಹಾಸನದಲ್ಲಿ ಆಯೋಜಿಸಲಾಗಿರುವ ಸ್ವಾಭಿಮಾನಿ ಸಮಾವೇಶಕ್ಕೆ ಹೊಸ ಸ್ವರೂಪ ಕೊಟ್ಟ ಡಿಕೆಶಿ

ಹಾಸನದಲ್ಲಿ ಆಯೋಜಿಸಲಾಗಿರುವ ಸ್ವಾಭಿಮಾನಿ ಸಮಾವೇಶಕ್ಕೆ ಹೊಸ ಸ್ವರೂಪ ಕೊಟ್ಟ ಡಿಕೆಶಿ

New format for Swabhimani convention organized in Hassan

ಬೆಂಗಳೂರು,ಡಿ.3- ಹಾಸನದಲ್ಲಿ ಆಯೋಜಿಸಲಾಗಿರುವ ಸ್ವಾಭಿಮಾನಿ ಸಮಾವೇಶದ ಸ್ವರೂಪ ಬದಲಾವಣೆಯಾಗಿದ್ದು, ಕಾಂಗ್ರೆಸ್‌‍ ಕಾರ್ಯಕ್ರಮವಾಗಿ ಪರಿವರ್ತನೆಗೊಂಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2006 ರಿಂದಲೂ ಶೋಷಿತ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಂಘಟನೆಗಳ ಜೊತೆಯಲ್ಲಿ ಕಾಲಕಾಲಕ್ಕೂ ಸ್ವಾಭಿಮಾನಿ ಸಮಾವೇಶಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.

ಮೇಲ್ನೋಟಕ್ಕೆ ಇದು ಸಿದ್ದರಾಮಯ್ಯ ಅವರ ಬಲಪ್ರದರ್ಶನದ ವೇದಿಕೆ ಎಂದು ಕಂಡುಬಂದರೂ ಶೋಷಿತ ಸಮುದಾಯಗಳ ಸ್ವಾಭಿಮಾನ ಅಸಿತೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ರಮವಾಗಿ ಪ್ರಚಲಿತದಲ್ಲಿದೆ.ಹಲವಾರು ಬಾರಿ ಇಂತಹ ಸಮಾವೇಶಗಳು ಸಾಮಾಜಿಕ ಸ್ಥಿತ್ಯಂತರ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾರ್ಗಸೂಚಿಯಾಗಿವೆ.

ಇಂತಹ ಸಮಾವೇಶಗಳು ರಾಜಕೀಯೇತರವಾಗಿ ಪ್ರಗತಿಪರ ಚಿಂತಕರು, ಸಾಮಾಜಿಕ ಕಾರ್ಯಕರ್ತರು ಕೈಜೋಡಿಸಿ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಅದು ಪರೋಕ್ಷವಾಗಿ ಕಾಂಗ್ರೆಸ್‌‍ ಪಕ್ಷಕ್ಕೆ ಭೌತಿಕ ಬೆಂಬಲ ಕಲ್ಪಿಸಿಕೊಡುತ್ತಿತ್ತು. ಈ ಸಮಾವೇಶಗಳಿಗೆ ಸಿದ್ದರಾಮಯ್ಯ ಕಾಂಗ್ರೆಸ್‌‍ ಪಕ್ಷ ಮತ್ತು ಸರ್ಕಾರದ ಶಕ್ತಿ ಹಾಗೂ ಸಂಪನೂಲವನ್ನು ಬಳಕೆ ಮಾಡುತ್ತಿದ್ದರೂ ಮೂಲ ಉದ್ದೇಶ ಭಿನ್ನವಾಗಿರುತ್ತಿತ್ತು. ಜೊತೆಜೊತೆಯಲ್ಲಿ ಸಿದ್ದರಾಮಯ್ಯ ಅವರ ಬಲವರ್ಧನೆಯೂ ನಡೆಯುತ್ತಿತ್ತು.

ಕಾಂಗ್ರೆಸ್‌‍ ಪಕ್ಷದ ಸಂಪನೂಲ ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳುತ್ತಿದ್ದಾರೆ ಎಂಬ ಅಸಹನೆಯಿಂದ ಕುದಿಯುತ್ತಿದ್ದ ಒಂದು ವರ್ಗ ಇಲ್ಲಸಲ್ಲದ ವದಂತಿಗಳನ್ನು ಹುಟ್ಟುಹಾಕಿ ಸ್ವಾಭಿಮಾನಿ ಸಮಾವೇಶದ ಸ್ವರೂಪವನ್ನು ಕಾಂಗ್ರೆಸ್‌‍ ಕಾರ್ಯಕ್ರಮವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯ ಅವರು ಇತ್ತೀಚಿನ ದಿನಗಳಲ್ಲಿ ಮುಡಾ ಸೇರಿದಂತೆ ಬೇರೆಬೇರೆ ಪ್ರಕರಣಗಳಲ್ಲಿ ಇಕ್ಕಟ್ಟಿಗೆ ಸಿಲುಕಿರುವುದರಿಂದಾಗಿ ಕಾಂಗ್ರೆಸ್‌‍ ಒಳವಲಯದ ಹೊಟ್ಟೆಕಿಚ್ಚನ್ನು ಮೆಟ್ಟಿನಿಂತು ದಾಷ್ಟ್ಯತನ ತೋರಿಸುವ ಸ್ಥಿತಿಯಲ್ಲಿಲ್ಲ.

ಈ ಸಂದರ್ಭವನ್ನು ಬಳಸಿಕೊಂಡಿರುವ ಪಕ್ಷದ ಅಸಹನೀಯ ವರ್ಗ ಸ್ವಾಭಿಮಾನಿ ಸಮಾವೇಶದ ಕಿಚ್ಚನ್ನು ತಣ್ಣಗಾಗಿಸಿದೆ. ಹೈಕಮಾಂಡ್‌ಗೆ ಅನಾಮಧೇಯ ಪತ್ರ ಬರೆಯುವುದಕ್ಕೂ ಅದೇ ವೇಳೆ ದೆಹಲಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಹಿರಿಯ ನಾಯಕರ ಜೊತೆ ಚರ್ಚೆ ನಡೆಸಿರುವುದಕ್ಕೂ ಸಮಾನಾಂತರವಾಗಿದೆ.

ಪಕ್ಷದ ಸಾಮರ್ಥ್ಯ, ಸಂಪನೂಲ ಬಳಕೆಯಾಗುವುದರಿಂದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌‍ ಚಿಹ್ನೆ ಮತ್ತು ಬ್ಯಾನರ್‌ಗಳು ಕಾಣಿಸಿಕೊಳ್ಳಬೇಕು ಎಂದು ಹೈಕಮಾಂಡ್‌ ಷರತ್ತು ವಿಧಿಸಿದೆ.
ಹೀಗಾಗಿ ಸಿದ್ದರಾಮಯ್ಯ ಅವರ ಬೆಂಬಲಿಗರು, ಹಿತೈಷಿಗಳು ಸೇರಿ ನಡೆಸುತ್ತಿದ್ದ ಸ್ವಾಭಿಮಾನಿ ಸಮಾವೇಶ ಕಾಂಗ್ರೆಸ್‌‍ ಸಮಾವೇಶವಾಗಿ ಪರಿವರ್ತನೆಗೊಂಡಿದೆ. ತನ್ನ ಕಾವು ಕಳೆದುಕೊಂಡಂತಾಗಿದೆ.

ಪಕ್ಷದ ಚಿಹ್ನೆಯಡಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಬಹಳಷ್ಟು ಮಂದಿ ಚಿಂತಕರು, ಪ್ರಜ್ಞಾವಂತರು ಹಿಂದೆ ಸರಿದಿದ್ದಾರೆ. ಈ ಮೊದಲು ದಾವಣಗೆರೆ, ರಾಯಚೂರು ಸೇರಿದಂತೆ ಹಲವು ಕಡೆಗಳಲ್ಲಿ ಸ್ವಾಭಿಮಾನಿ ಸಮಾವೇಶ ನಡೆದಾಗ ಬೇರೆಯದೇ ರೀತಿಯ ಉತ್ಸಾಹ, ಹುಮಸ್ಸು ಕಂಡುಬಂದಿತ್ತು. ಕಳೆದ ಮೂರು ದಿನಗಳವರೆಗೂ ಇದೇ ರೀತಿಯ ಉತ್ಸಾಹ ಉಳಿದಿತ್ತು. ಆದರೆ ದೆಹಲಿಯಲ್ಲಿನ ಸಭೆ ಷರತ್ತುಗಳ ಬಳಿಕ ಕಾರ್ಯಕ್ರಮದ ಸ್ವರೂಪ ಬದಲಾಗಿದ್ದು, ಉತ್ಸಾಹವೂ ತಗ್ಗಿದಂತೆ ಕಂಡುಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಭೆಗಳ ಮೇಲೆ ಸಭೆಗಳನ್ನು ನಡೆಸಿ ಕಾರ್ಯಕ್ರಮವನ್ನು ತಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಪಕ್ಷದ ಪ್ರಮುಖರಿಗೆ ಕಾರ್ಯಕ್ರಮದ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ಸ್ವಯಂ ಸೇವಕರಾಗಿ ಕೆಲಸ ಮಾಡಲು ಮುಂದೆ ಬಂದಿದ್ದ ಬಹಳಷ್ಟು ಮಂದಿ ಪ್ರಜ್ಞಾವಂತರು ಡಿ.ಕೆ.ಶಿವಕುಮಾರ್‌ ಅವರ ಮಧ್ಯಪ್ರವೇಶದಿಂದ ತಮ ಪಾಡಿಗೆ ತಾವು ದೂರ ಸರಿದಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತ್ರ ಭಾಗವಹಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

RELATED ARTICLES

Latest News