ಬೆಂಗಳೂರು,ಡಿ.26- ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭವನ್ನು ಬೆಳಗಾವಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆದರೆ ಹಾಕಲಾಗಿರುವ ಕಟೌಟ್‌ಗಳಲ್ಲಿ ಈ ಹೊಸ ಗಾಂಧಿಗಳು ಇದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಹೆಸರನ್ನು ಸರಣೆ ಮಾಡುತ್ತಿರುವ ಬೆಳಗಾವಿಯಲ್ಲಿ ಹಾಕಿರುವ ಕಟೌಟ್‌ಗಳಲ್ಲಿ ಗಾಂಧೀಜಿಯೇ ಕಂಡುಬರುತ್ತಿಲ್ಲ. ಆಕಾಶದೆತ್ತರಕ್ಕೆ ನೋಡುವಂತೆ ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಾಕಿದ್ದಾರೆ ಎಂದರು.
ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಒಂದು ವರ್ಷ ಗಾಂಧೀಜಿಯವರ ಹೆಸರಿನಲ್ಲಿ ರಾಜ್ಯ ಸರ್ಕಾರ ಕಾರ್ಯಕ್ರಮ ಮಾಡುವ ಉದ್ದೇಶ ಹೊಂದಿದೆಯಂತೆ.
ಗಾಂಧೀಜಿಯವರಿಗೆ ಯಾವ ರೀತಿಯ ಗೌರವ ಕೊಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ರಾಜ್ಯ ಸರ್ಕಾರದ ನಡೆ ಯಾವ ರೀತಿ ಇದೆ ಎಂಬುದು ಜನರಿಗೆ ಗೊತ್ತಿದೆ. ಮೃಗೀಯ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣದ ಬಗ್ಗೆ ಆಮೇಲೆ ಮಾತನಾಡೋಣ ಎಂದಷ್ಟೇ ಪ್ರತಿಕ್ರಿಯಿಸಿದರು.