ನವದೆಹಲಿ, ಸೆ.18– ಹೊಸ ಜಿಎಸ್‌ಟಿಯಿಂದ ಡಿಸ್ಕಾಂಗಳ ವಿದ್ಯುತ್ ಖರೀದಿ ಹೊರೆ ತಗ್ಗಿಸಲಿದ್ದು, ದೇಶಾದ್ಯಂತ ವಾರ್ಷಿಕ 2-3 ಸಾವಿರ ಕೋಟಿ ರೂ. ವಿದ್ಯುತ್ ಖರೀದಿ ವೆಚ್ಚ ಉಳಿತಾಯವಾಗಲಿದೆ. ಅಲ್ಲದೇ, ಪಿಎಂ ಸೂರ್ಯಘರ್ ಮತ್ತು ಪಿಎಂ ಕುಸುಮ್ ಘಟಕಗಳ ವೆಚ್ಚವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸ ಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಜಿಎಸ್‌ಟಿ 2ರಲ್ಲಿ ನವೀಕರಿಸಬಹುದಾದ ಇಂಧನ ಸಾಧನ-ಸಲಕರಣೆಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದ್ದು, ಇದು ಭಾರತದ ಶುದ್ಧ ಇಂಧನ ಪರಿವರ್ತನಾ ಗುರಿಯ ಮತ್ತಷ್ಟು ವೇಗಕ್ಕೆ ಮತ್ತು ಅತ್ಯಂತ ಕಡಿಮೆ ವಿದ್ಯುತ್ ಉತ್ಪಾದನಾ ವೆಚ್ಚಕ್ಕೆ ನಾಂದಿ ಹಾಡಲಿದೆ. ಶುದ್ಧ ಇಂಧನ ಯೋಜನೆಗಳ ವೆಚ್ಚ ಸಹ ಕಡಿಮೆಯಾಗುತ್ತದೆ. ಮನೆಗಳು, ರೈತರು, ಕೈಗಾರಿಕೆ ಮತ್ತು ಡೆವಲಪರ್‌ಗಳಿಗೆ ಇದರ ನೇರ ಪ್ರಯೋಜನವಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಿಎಂ ಸೂರ್ಯಘರ್ ಅಗ್ಗ: ಪಿಎಂ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಮೇಲ್ಛಾವಣಿ 3 ಕಿಲೋವ್ಯಾಟ್ ಘಟಕ ಅಳವಡಿಕೆ 9,000ರೂ.ನಿಂದ 10,500 ರೂ.ವರೆಗೆ ಅಗ್ಗವಾಗಲಿದೆ. ಇದು ಲಕ್ಷಾಂತರ ಕುಟುಂಬಗಳು ಸೌರಶಕ್ತಿ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಲಿದೆ. ಅಲ್ಲದೇ, ವಿದ್ಯುತ್ ಬಳಕೆಯನ್ನೂ ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ.
ಪಿಎಂ-ಕುಸುಮ್ ಅಡಿ ರೈತರು ಸುಮಾರು 2.5 ಲಕ್ಷ ರೂ. ವೆಚ್ಚದ 5 ಹೆಚ್.ಪಿ. ಸೌರ ಪಂಪ್ ಅಳವಡಿಸಿಕೊಳ್ಳುವುದಾದರೆ ಸುಮಾರು 17,500 ರೂ. ಕಡಿಮೆಯಾಗಲಿದೆ. ಈ ಯೋಜನೆಯಡಿ ರೈತರು ಸಹ ಗಣನೀಯವಾಗಿ ಪ್ರಯೋಜನ ಪಡೆಯುತ್ತಾರೆ. ದೇಶದಲ್ಲಿ 10 ಲಕ್ಷ ಸೌರ ಪಂಪ್‌ಗಳ ಪ್ರಮಾಣದಲ್ಲಿ ಒಟ್ಟಾರೆ 1,750 ಕೋಟಿ ರೂ.ಉಳಿಸಬಹುದು ಎಂದು ಅವರು ತಿಳಿಸಿದ್ದಾರೆ.
ಉದ್ಯೋಗ ಸೃಜನೆ: ಮಾಡ್ಯೂಲ್ ಮತ್ತು ಘಟಕ ವೆಚ್ಚದಲ್ಲಿ ಶೇ.3ರಿಂದ 4ರಷ್ಟು ಕಡಿಮೆ ಮಾಡುವುದು ಹಾಗೂ ಆರ್‌ಇ ಸಲಕರಣೆಗಳ ಉತ್ಪಾದನೆ ಹೆಚ್ಚಿಸುವುದು ಇದರ ಸದುದ್ದೇಶವಾಗಿದೆ. ಈ ಮಟ್ಟದ ಜಿಎಸ್‌ಟಿ ಸುಧಾರಣೆಯಿಂದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಮುಂದಿನ ದಶಕದಲ್ಲಿ ಸರಿ ಸುಮಾರು 5ರಿಂದ 7 ಲಕ್ಷ ಹಸಿರು ಉದ್ಯೋಗಗಳು ಸೃಜನೆಯಾಗಲಿವೆ ಎಂದಿದ್ದಾರೆ.
ಸಾಮಾನ್ಯವಾಗಿ ಪ್ರತಿ ಮೆಗಾವ್ಯಾಟ್ ವಿದ್ಯುತ್ ಘಟಕಕ್ಕೆ ಸುಮಾರು 3.5 -4 ಕೋಟಿ ರೂ.ಮೊತ್ತದ ಅವಶ್ಯಕತೆ ಇರುತ್ತದೆ. ಈಗ ಸೌರ ಯೋಜನೆ ಬಂಡವಾಳ ವೆಚ್ಚವು ಪ್ರತಿ ಮೆಗಾವ್ಯಾಟ್‌ಗೆ 2025 ಲಕ್ಷ ರೂ.ಉಳಿತಾಯವಾಗಲಿದೆ. 500 ಮೆಗಾವ್ಯಾಟ್ ಸೌರ ಪಾರ್ಕ್‌ನ ಪ್ರಮಾಣದಲ್ಲಿ ಇದು 100 ಕೋಟಿ ರೂ.ಗಿಂತ ಹೆಚ್ಚಿನ ಯೋಜನಾ ವೆಚ್ಚವನ್ನು ಉಳಿಸುತ್ತದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
2030ರ ವೇಳೆಗೆ 500 ಜಿ ಡಬ್ಲ್ಯು ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿ ಹಾಗೂ ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸುತ್ತದೆ. ದೇಶೀಯ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡಲಿದೆ. ಸ್ವದೇಶಿ ನಿರ್ಮಿತ ಇಂಧನ ಉಪಕರಣಗಳ ಭರಾಟೆ ಹೆಚ್ಚಿಸುವುದಲ್ಲದೆ, ಈ ಮೂಲಕ ಮೇಕ್ ಇನ್ ಇಂಡಿಯಾ, ಆತನಿರ್ಭರ ಭಾರತ್ ಯೋಜನೆಗಳಿಗೆ ಬಲ ತುಂಬಲಿದೆ ಎಂದಿದ್ದಾರೆ.
ಭಾರತ 2030ರ ವೇಳೆಗೆ 100 ಜಿ ಡಬ್ಲ್ಯು ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಗುರಿ ಹೊಂದಿದ್ದರಿಂದ ದೇಶೀಯ ಉತ್ಪಾದನಾ ಕೇಂದ್ರಗಳಲ್ಲಿ ಹೊಸ ಹೂಡಿಕೆಯನ್ನು ಉತ್ತೇಜಿಸುತ್ತದೆ. ಪ್ರತಿ ಜಿ ಡಬ್ಲ್ಯು ಉತ್ಪಾದನೆ ಸುಮಾರು 5,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಕಡಿತವು ಹೂಡಿಕೆದಾರರ ವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಹೊಸ ದರದ ಜಿಎಸ್‌ಟಿಯು ವಿದ್ಯುತ್ ಖರೀದಿ ಒಪ್ಪಂದ ಮತ್ತು ಯೋಜನೆಗಳನ್ನು ತ್ವರಿತಗೊಳಿಸಲು ಅನುವು ಮಾಡಿಕೊಡುತ್ತದೆ. ಭಾರತ 2030ರ ವೇಳೆಗೆ ಸುಮಾರು 300 ಜಿ ಡಬ್ಲ್ಯು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರಿಸಲು ಯೋಜಿಸುತ್ತಿದ್ದು, ಶೇ.23ರಷ್ಟು ವೆಚ್ಚ ಕಡಿತವಾಗಿ ಹೂಡಿಕೆ ಸಾಮರ್ಥ್ಯ 11.5 ಲಕ್ಷ ಕೋಟಿ ರೂ. ಮೊತ್ತವನ್ನು ಮುಕ್ತಗೊಳಿಸುತ್ತದೆ. ಪ್ರತಿ ಸೌರಶಕ್ತಿ ವಾರ್ಷಿಕ 1.3 ಮಿಲಿಯನ್ ಟನ್ ಸಿಓ2 ಉಳಿಸುತ್ತದೆ. 2030ರ ವೇಳೆಗೆ ವರ್ಷಕ್ಕೆ ಹೆಚ್ಚುವರಿಯಾಗಿ 5070 ಮಿಲಿಯನ್ ಟನ್ ಸಿಓ2 ಹೊರಸೂಸುವಿಕೆ ತಪ್ಪಿಸಬಹುದು ಎಂದಿದ್ದಾರೆ.