ಬೆಳಗಾವಿ,ಡಿ.17- ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಹೊಸದಾಗಿ ಸರ್ಕಾರಿ ಇಲ್ಲವೇ ಖಾಸಗಿ ಬಡಾವಣೆ ನಿರ್ಮಿಸುವಾಗ ಮೂಲ ಸೌಕರ್ಯ ಕಲ್ಪಿಸುವ ಕುರಿತ ಹೊಸ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ರಾಜ್ ಸಂಸ್ಥೆಗಳ ಸಮಿತಿ ಶಿಫಾರಸ್ಸು ಮಾಡಿದೆ.
ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ರಾಜ್ ಸಂಸ್ಥೆಗಳ ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು, ತಮ ಸಮಿತಿಯ 2023-24ನೇ 39ನೇ ವರದಿ ಹಾಗೂ 2024-25ನೇ ಸಾಲಿನ 40, 41, 42ನೇ ವರದಿಗಳನ್ನು ವಿಧಾನಸಭೆಗೆ ಮಂಡಿಸಿದರು.
41ನೇ ವರದಿಯಲ್ಲಿ ಬಡಾವಣೆಗಳಲ್ಲಿ ರಸ್ತೆಗಳನ್ನು ನಿರ್ಮಿಸುವಾಗ ಬಡಾವಣೆಗಳಿಗೆ ನೀರು, ವಿದ್ಯುತ್, ಓಎಫ್ಸಿ ಕೇಬಲ್ಗಳ ಅಳವಡಿಕೆಗೆ ರಸ್ತೆಯ ಎರಡೂ ಬದಿಗಳಲ್ಲಿ ಪ್ರತ್ಯೇಕ ಡಕ್ಟ್ಗಳನ್ನು ನಿರ್ಮಾಣ ಮಾಡುವ ಕುರಿತು ಹೊಸ ಕಾನೂನಿನ ಅಗತ್ಯವಿದೆ ಎಂದು ಶಿಫಾರಸ್ಸು ಮಾಡಿದೆ.
ಸಮಿತಿಯ 2023-24ನೇ ಸಾಲಿನ 39ನೇ ವರದಿಯಲ್ಲಿ ಬೆಂಗಳೂರಿನ ಚಂದಾಪುರ ಕೆರೆಗೆ ಕಲುಷಿತ ನೀರು ಬರುತ್ತಿರುವುದನನು ತಡೆಗಟ್ಟಲು ಎಸ್ಟಿಪಿ ನಿರ್ಮಿಸುವುದು ಅಗತ್ಯವಾಗಿರುತ್ತದೆ. ಆದಷ್ಟು ಶೀಘ್ರ ಎಸ್ಟಿಪಿ ಘಟಕ ಸ್ಥಾಪಿಸಲು ಜಾಗವನ್ನು ಗುರುತಿಸಬೇಕು. ನ್ಯಾಯಾಲಯದ ಆದೇಶದ ಅಡಚಣೆಯನ್ನು ಪರಿಹರಿಸಿಕೊಂಡು ತಕ್ಷಣವೇ ಜಾರಿಗೊಳಿಸಲು ಕಾರ್ಯೋನುಖರಾಗಬೇಕೆಂದು ಶಿಫಾರಸು ಮಾಡಲಾಗಿದೆ.
ವಿಧಾನಮಂಡಲದ ಸ್ಥಾಯಿ ಸಮಿತಿಗಳು ಸಂವಿಧಾನಬದ್ದವಾಗಿ ಪ್ರದತ್ತವಾದ ಪ್ರಕಾರ್ಯಗಳನ್ನು ನಿರ್ವಹಿಸಲು ಸರ್ಕಾರ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ , ಪ್ರಧಾನ ಕಾರ್ಯದರ್ಶಿ ,ಕಾರ್ಯದರ್ಶಿಗಳು ಕಡ್ಡಾಯವಾಗಿ ಸಮಿತಿ ಸಭೆಗಳಿಗೆ ಹಾಜರಾಗಬೇಕು. ಸಭೆಗಳಿಗೆ ಮುಂಚಿತವಾಗಿ ಸಮರ್ಪಕ ಇಲಾಖಾ ಉತ್ತರ ಅಥವಾ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕು.
ಸಮಿತಿ ಸಭೆಗಳಿಗೆ ಹಾಜರಾಗುವ ಇಲಾಖಾ ಅಧಿಕಾರಿಗಳು ಪೂರ್ವ ಸಿದ್ದತೆಯೊಂದಿಗೆ ಹಾಜರಾಗಿ ಸಮಿತಿ ಬಯಸುವ ಮಾಹಿತಿಗಳನ್ನು ಒದಗಿಸಬೇಕು. ಪೂರ್ವಾನುಮತಿ ಇಲ್ಲದೆ ಸಭೆಗಳಿಗೆ ಗೈರು ಹಾಜರಾಗುವಂತಿಲ್ಲ ಎಂಬುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದರು.
ಇಲಾಖಾ ಅಧಿಕಾರಿಗಳ ಮೇಲೆ ದೂರುಗಳು ಬಾರದಂತೆ ಮುಖ್ಯ ಕಾರ್ಯದರ್ಶಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಪುನಾವರ್ತನೆಯಾದಲ್ಲಿ ಶಿಸ್ತುಕ್ರಮ ಜರುಗಿಸಬೇಕೆಂದು ತಿಳಿಸಿದರು.