ಬೆಂಗಳೂರು, ನ.1- ಕೃತಕಬುದ್ಧಿಮತ್ತೆಯ ತಂತ್ರಜ್ಞಾನ ಇಡೀ ಜಗತ್ತನ್ನು ಆಕ್ರಮಿಸುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗುವ ಆತಂಕವಿದೆ. ಹೊಸ ಸವಾಲಿಗೆ ತಕ್ಕ ಹಾಗೆ ಭಾಷೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಗೆ ಅನುಗುಣವಾಗಿ ಭಾಷೆಯನ್ನು ಮೇಲ್ದರ್ಜೆಗೆರಿಸಲು ತಂತ್ರಜ್ಞರು ಹಾಗೂ ವಿದ್ವಾಂಸರು ಒಗ್ಗೂಡಿ ಕೆಲಸ ಮಾಡಬೇಕು. ಸರ್ಕಾರ ಕೂಡ ಕನ್ನಡ ಭಾಷೆ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟಕ್ಕೇರಿಸಲು ಹೊಸ ನೀತಿ ರೂಪಿಸಲಿದೆ ಎಂದು ಹೇಳಿದರು.
ಕನ್ನಡಕ್ಕೆ ಸಾಕಷ್ಟು ಸವಾಲುಗಳಿವೆ. ಹೊಸ ತಲೆ ಮಾರಿನ ಮಕ್ಕಳಲ್ಲಿ ಭಾಷಾಭಿಮಾನ ಮೂಡಿಸಿ ನಮ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳೋಣ. ಯುವ ತಲೆಮಾರು ಎದ್ದು ನಿಂತು ಕನ್ನಡ ಮತ್ತು ಕರ್ನಾಟಕವನ್ನು ಮುಂದುವರೆದ ದೇಶಗಳ ಮಟ್ಟಕ್ಕೆ ಬೆಳೆಸಬೇಕಾಗಿದೆ ಎಂದರು.
ಭಾಷೆ ನಮ ಹೆಮೆಯ ಪರಂಪರೆ ಮತ್ತು ಸಂಸ್ಕೃತಿ ಅಭಿವ್ಯಕ್ತಿಯ ರೂಪ. ಕನ್ನಡಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಮಹಾ ಕಾವ್ಯ ಮಹಾಭಾರತದಲ್ಲಿ ಹಾಗೂ ದಕ್ಷಿಣ ಭಾರತದ ಶಿಲ್ಪ ಕಾವ್ಯಗಳಲ್ಲಿ ಕನ್ನಡ ಉಲ್ಲೇಖ ಕಂಡು ಬರುತ್ತಿದೆ. ಕನ್ನಡ ನಾಡಿನ ಸಾಮ್ರಾಜ್ಯ ಪ್ರಭಾವ ಭಾರತದೆಲ್ಲೆಡೆ ಇದೆ. ಬಂಗಾಳದ ಸೇನಾ ರಾಜವಂಶರು ಹಾಗೂ ಬಿಹಾರದ ಯಾದವರು ತಮನ್ನು ತಾವು ಕನ್ನಡದ ವಂಶಸ್ಥರು ಎಂದು ಹೇಳಿಕೊಂಡಿದ್ದಾರೆ.
ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡಕ್ಕೆ ತನ್ನದೇ ಆದ ಭಾಷಾ ಸ್ಥಾನಮಾನ ಸಿಕ್ಕಿದೆ. ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿ, ಬಹು ಜನಾಂಗಗಳು ಒಗ್ಗೂಡಿ ಬದಕುವುದನ್ನು ನಮ ಹಿರಿಯರು ಕಂಡುಕೊಂಡಿದ್ದರು. ಮೊದಲಿನಿಂದಲೂ ಐಕ್ಯತೆಯೊಂದಿಗೆ ನಮಲ್ಲಿ ನಾಡನ್ನು ಕಟ್ಟಿ ಬೆಳೆಸಲಾಗಿದೆ. ನಾವು ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.
ಶಿಕ್ಷಣ ಬಲರ್ವಧನೆಗೆ 65 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದೆ. ವಸತಿ ಶಾಲೆಗಳಲ್ಲಿ 8.36 ಲಕ್ಷ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಅಗತ್ಯ ಇರುವ ಕಡೆಗಳಲ್ಲಿ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಆರಂಭಿಸುತ್ತಿದ್ದೇವೆ. ರಾಜ್ಯಗಳಲ್ಲಿ ಶತಮಾನ ಪೂರೈಸಿದ 3 ಸಾವಿರ ಸರ್ಕಾರಿ ಶಾಲೆಗಳಿವೆ, ಅವುಗಳ ಜೀರ್ಣೋದ್ಧಾರ ಮಾಡಲಾಗುವುದು ಎಂದರು.
800 ಸರ್ಕಾರಿ ಶಾಲೆಗಳನ್ನು ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 180 ಮದ್ರಾಸ್‌ಗಳಲ್ಲಿ ಕನ್ನಡ ಕಲಿಸಲಾಗುತ್ತಿದ್ದು, ಅದನ್ನು 1,500 ಮದ್ರಾಸಗಳಿಗೆ ವಿಸ್ತರಿಸಲಾಗುತ್ತಿದೆ. 483 ಕೋಟಿ ರೂ. ವೆಚ್ಚಗಳಲ್ಲಿ 100 ಉರ್ದು ಶಾಲೆಗಳನ್ನು ಕೆಪಿಎಸ್ ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರ ನೇಮಕಾತಿ ಹಾಗೂ ತರಬೇತಿಗಳನ್ನು ಕಾಲಕಾಲಕ್ಕೆ ಕೈಗೊಳ್ಳಲಾಗಿದೆ. 800 ಪದವಿ ಪೂರ್ವ ಉಪನ್ಯಾಸಕರು ಸೇರಿ ಹೊಸದಾಗಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದರು.
ಪ್ರೊಫೆಸರ್ ಸುಖದೇವ್ ಭೋರಟ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ವರದಿ ನೀಡಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಲಾಗುವುದು. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತರಲಿದೆ ಎಂದರು.
ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿನ ಅಪಾಯಗಳ ಬಗ್ಗೆ ಇದೇ ವೇಳೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ತಂತ್ರಜ್ಞಾನ ಬಳಕೆ ಅನುಕೂಲದ ಜೊತೆಗೆ ಅನಾನುಕೂಲಗಳನ್ನು ತಂದೊಡ್ಡುತ್ತಿದೆ ಎಂದರು.
ರಾಜ್ಯದಲ್ಲಿ ಪಂಚಖಾತ್ರಿ ಯೋಜನೆಗಳ ಮೂಲಕ 1.04 ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ರವಾನಿಸಲಾಗಿದೆ ಎಂದು ಯೋಜನೆ ಫಲಾನುಭವಿಗಳ ಬಗ್ಗೆ ವಿವರಣೆ ನೀಡಿದರು. 2024-25ನೇ ಸಾಲಿನ ವಿದೇಶಿ ಹೂಡಿಕೆಯಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿ ಕರ್ನಾಟಕ ಮೊದಲ ಸ್ಥಾನಕ್ಕೇರಿದೆ. 50,107 ಕೋಟಿ ವಿದೇಶಿ ನೇರ ಹೂಡಿಕೆ ರಾಜ್ಯದಲ್ಲಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ದೇಶದಲ್ಲೇ ಶೇ.51ರಷ್ಟು ಹೂಡಿಕೆ ಪಾಲನ್ನು ಹೊಂದಿವೆ ಎಂದರು. ಹಿಂದಿನ ಸರ್ಕಾರ ವಿದ್ಯುತ್ ಉತ್ಪಾದನೆಯನ್ನು ನಿರ್ಲಕ್ಷ್ಯಿಸಿತ್ತು, ನಮ ಸರ್ಕಾರ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ನವೀಕೃತ ಇಂಧನವೇ 24 ಸಾವಿರ ಮೇಗಾವ್ಯಾಟ್ ನಷ್ಟವಾಗಿದೆ.
ತಲಾ ಆದಾಯದಲ್ಲೂ ಕಳೆದ 10 ವರ್ಷದಲ್ಲಿ ಶೇ.101ರಷ್ಟು ಸಾಧನೆ ಮಾಡಲಾಗಿದೆ. ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಹೈನುಗಾರಿಕೆ ಪ್ರೋತ್ಸಾಹಿಸಲು ಗೋವಿನಿಂದ ಗ್ರಾಹಕರವರೆಗೆ ಎಂಬ ಶೀರ್ಷಿಕೆಯಲ್ಲಿ ನಂದಿನ ಬ್ರಾಂಡ್‌ನ 175ಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 8 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಬಂಡವಾಳ ವೆಚ್ಚ ಹೆಚ್ಚಿಸಲಾಗಿದೆ. ನಿರುದ್ಯೋಗದ ಪ್ರಮಾಣ ದೇಶದಲ್ಲಿ ಶೇ.7ರಷ್ಟಿದ್ದರೆ, ರಾಜ್ಯದಲ್ಲಿ ಶೇ.2.7ರಷ್ಟಿದೆ. ಶೇ.60ರಷ್ಟು ಜೈವಿಕ ತಂತ್ರಜ್ಞಾನ ಕಂಪನಿಗಳು ರಾಜ್ಯದಲ್ಲಿವೆ. ರಫ್ತಿನಲ್ಲಿ ಶೇ.58ರಷ್ಟು ಕೊಡುಗೆ ನೀಡುತ್ತಿದೆ. ಐಟಿ, ಹಣಕಾಸು, ಆತಿಥ್ಯ, ರಿಯಲ್ ಎಸ್ಟೇಟ್ ನಲ್ಲಿ, ಕೃಷಿಯಲ್ಲಿ ಕಾಫಿ, ಎಣ್ಣೆಕಾಳು, ರಾಗಿ ಸೇರಿ ಅನೇಕ ಉತ್ಪನ್ನಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿಕೊಂಡರು.
ಜನರಲ್ಲಿ ಭಾಷೆ ಮತ್ತು ಸಂಸ್ಕೃತಿಯ ಅಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳನ್ನು ತಮ ಸರ್ಕಾರ ಆಯೋಜಿಸುತ್ತಲೆ ಇದೆ. ವಾಣಿಜ್ಯ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸಲಾಗಿದ್ದು, ಹೆಸರಾಯಿತು ಕನ್ನಡ ಉಸಿರಾಯಿತು ಕನ್ನಡ ಅಭಿಯಾನ ನಡೆಸಲಾಗಿದೆ. ವಿಧಾನಸೌಧದ ಬಳಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಕನ್ನಡಕ್ಕೆ ಈ ವರ್ಷ ಬಾನುಮುಷ್ತಾಕ್ ಮತ್ತು ದೀಪಾಬಸ್ತಿ ಬೂಕರ್ ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಕನ್ನಡವನ್ನು ಜಾಗತಿಕ ವೇದಿಕೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಸರಿಸಿದರು.
ಏಕೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ನಾಡಿನ ಅಸೀತೆಗಾಗಿ ನಡೆದ ಗೋಕಾಕ್ ಚಳುವಳಿಗಾರರನ್ನು ಸರಿಸಿಕೊಳ್ಳುವುದು ಅನಿವಾರ್ಯ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಾಸಕರಾದ ರಿಜ್ವಾನ್ ಅರ್ಷದ್, ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಬಿ.ಜಿ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
