Friday, October 3, 2025
Homeರಾಷ್ಟ್ರೀಯ | Nationalಅಕ್ಟೋಬರ್‌ನಿಂದ ಜಾರಿಗೆ ಬರಲಿವೆ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುವ ಹೊಸ ನಿಯಮಗಳು

ಅಕ್ಟೋಬರ್‌ನಿಂದ ಜಾರಿಗೆ ಬರಲಿವೆ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುವ ಹೊಸ ನಿಯಮಗಳು

New Rules to take effect from 1st october

ನವದೆಹಲಿ,ಸೆ.26- ಮುಂದಿನ ಅಕ್ಟೋಬರ್‌ ತಿಂಗಳ ಆರಂಭದಿಂದಲೇ ಸಾಮಾನ್ಯ ಜನರ ಜೀವನ ಖರ್ಚಿನ ಮೇಲೆ ನೇರವಾಗಿ ಪರಿಣಾಮ ಬೀರುವ ಹಲವಾರು ಹೊಸ ನಿಯಮಗಳು ಜಾರಿಯಾಗುತ್ತಿವೆ.

ರೈಲು ಟಿಕೆಟ್‌ನಿಂದ ಹಿಡಿದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ವರೆಗೆ ಬದಲಾವಣೆಗಳು ನಡೆಯಲಿವೆ. ಇದಲ್ಲದೆ ಎಲ್‌ಪಿಜಿ ಸಿಲಿಂಡರ್‌ ಬೆಲೆಗಳು, ಆನ್ಲೈನ್‌ ಗೇಮಿಂಗ್‌ ಕಾನೂನುಗಳು ಮತ್ತು ಇಪಿಎಫ್‌ ಹಣ ಹಿಂಪಡೆಯುವ ಸೌಲಭ್ಯಗಳಲ್ಲಿಯೂ ಮಹತ್ವದ ಪರಿಷ್ಕರಣೆಗಳು ಆಗಲಿವೆ.

ರೈಲು ಟಿಕೆಟ್‌ ಬುಕ್ಕಿಂಗ್‌ನಲ್ಲಿ ಆಧಾರ್‌ ಕಡ್ಡಾಯ :
ಅಕ್ಟೋಬರ್‌ 1, 2025ರಿಂದ ರೈಲ್ವೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರಲಿದೆ. ಇದರ ಪ್ರಕಾರ, IRCTC ವೆಬ್ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ ಮೂಲಕ ಬುಕಿಂಗ್‌ ಪ್ರಾರಂಭವಾದ ಮೊದಲ 15 ನಿಮಿಷಗಳಲ್ಲಿ ಸಾಮಾನ್ಯ ಟಿಕೆಟ್‌ ಬುಕ್‌ ಮಾಡುವಾಗ ಆಧಾರ್‌ ಆಧಾರಿತ ದೃಢೀಕರಣ ಕಡ್ಡಾಯವಾಗಲಿದೆ. ಈ ಕ್ರಮದಿಂದ ನಕಲಿ ಬುಕ್ಕಿಂಗ್‌ಗಳನ್ನು ತಡೆದು, ನಿಜವಾದ ಪ್ರಯಾಣಿಕರಿಗೆ ಟಿಕೆಟ್‌ ಸಿಗುವಂತೆ ಮಾಡಲು ರೈಲ್ವೆ ಸಚಿವಾಲಯ ಕ್ರಮ ಕೈಗೊಂಡಿದೆ. ಇದರ ಪರಿಣಾಮವಾಗಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಪಾರದರ್ಶಕತೆ ಲಭ್ಯವಾಗಲಿದೆ.

ಹೊಸ ಬದಲಾವಣೆ :
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಅ. 1ರಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಬಹು ಯೋಜನೆ ಚೌಕಟ್ಟು (Multiple Scheme Framework & MSF) ಎಂಬ ನಿಯಮ ಜಾರಿಯಾಗಲಿದೆ. ಇದರ ಮೂಲಕ ಸರ್ಕಾರೇತರ ವಲಯದ ಚಂದದಾರರು ಈಗ ಒಂದೇ PAN ಅಥವಾ PRAN ಅಡಿಯಲ್ಲಿ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
ಈ ಬದಲಾವಣೆಯಿಂದ ಹೂಡಿಕೆದಾರರಿಗೆ ಹೆಚ್ಚು ಆಯ್ಕೆಗಳು ದೊರೆಯಲಿದ್ದು, ನಿವೃತ್ತಿ ನಿಧಿ ರೂಪಿಸುವಲ್ಲಿ ಹೆಚ್ಚು ಸ್ವಾತಂತ್ರ್ಯ ಸಿಗಲಿದೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆಗಳಲ್ಲಿ ಬದಲಾವಣೆ :
ಪ್ರತಿ ತಿಂಗಳಂತೆ, ಅ.1ರಂದು ಎಲ್‌ಪಿಜಿ ಸಿಲಿಂಡರ್‌ ಬೆಲೆಗಳು ಬದಲಾಗುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆಗಳಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ತಿಂಗಳು ಬೆಲೆಗಳಲ್ಲಿ ಪರಿಷ್ಕರಣೆ ಕೂಡ ಮಾಡಲಾಗಿತ್ತು. ಈ ಬಾರಿ ಕೂಡ ಅಕ್ಟೋಬರ್‌ ಆರಂಭದಲ್ಲಿ ಸಿಲಿಂಡರ್‌ ದರದಲ್ಲಿ ಬದಲಾವಣೆ ಕಾಣಬಹುದಾದ್ದರಿಂದ, ಗೃಹಿಣಿಯರ ಪಾಕೆಟ್‌ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ.

ಹೊಸ ಕಾನೂನು :
ಅ.1ರಿಂದ ಆನ್ಲೈನ್‌ ಗೇಮಿಂಗ್‌ ಕ್ಷೇತ್ರದಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ. ಇದರ ಪ್ರಕಾರ, ದೇಶದಲ್ಲಿ ಯಾವುದೇ ರೀತಿಯ ಆನ್ಲೈನ್‌ ಜೂಜಾಟ, ಬೆಟ್ಟಿಂಗ್‌ ಅಥವಾ ನೈಜ ಹಣದ ಆಟಗಳಿಗೆ ಅವಕಾಶವಿರುವುದಿಲ್ಲ. ಸರ್ಕಾರವು ಸ್ಪಷ್ಟವಾಗಿ ಕಾನೂನಿನಲ್ಲಿ ಈ ಬಗ್ಗೆ ಹೇಳಿದ್ದು, ಕೇವಲ ಕಾನೂನಾತಕ ಮತ್ತು ಸುರಕ್ಷಿತ ಆನ್ಲೈನ್‌ ಗೇಮ್ಸೌ ಮಾತ್ರ ಪ್ರೋತ್ಸಾಹಿಸಲಾಗುತ್ತದೆ. ಈ ಕ್ರಮವು ಯುವಕರನ್ನು ಆರ್ಥಿಕ ನಷ್ಟ ಮತ್ತು ವ್ಯಸನದಿಂದ ರಕ್ಷಿಸುವ ಗುರಿಯನ್ನು ಹೊಂದಿದೆ.

ಇಪಿಎಫ್‌ ಹಣ ಹಿಂಪಡೆಯುವ ಹೊಸ ಸೌಲಭ್ಯ :
ದೀಪಾವಳಿ ಹಬ್ಬಕ್ಕೂ ಮುನ್ನ ಇಪಿಎಫ್‌ ಖಾತೆದಾರರಿಗೆ ಸಂತೋಷದ ಸುದ್ದಿ ಬರಬಹುದಾಗಿದೆ. ಅಕ್ಟೋಬರ್‌ 10-11ರಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಭೆಯಲ್ಲಿ, 3.0 ಅಡಿಯಲ್ಲಿ ಎಟಿಎಂಗಳ ಮೂಲಕ ನೇರವಾಗಿ ಪಿಎಫ್‌ ಹಣ ಹಿಂಪಡೆಯುವ ಅವಕಾಶ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಕ್ರಮ ಜಾರಿಯಾದರೆ, ಇಪಿಎಫ್‌ ಹಣವನ್ನು ಎಟಿಎಂಗಳಿಂದಲೇ ಸುಲಭವಾಗಿ ಪಡೆಯಬಹುದಾಗಿದೆ. ಇದರಿಂದ ನೌಕರರಿಗೆ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ.

ಅಕ್ಟೋಬರ್‌ ಆರಂಭದಿಂದ ಜಾರಿಯಾಗುವ ಈ ಐದು ನಿಯಮ ಬದಲಾವಣೆಗಳು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವಂತಿವೆ. ರೈಲು ಟಿಕೆಟ್‌ ಬುಕ್ಕಿಂಗ್‌ ನಿಯಮ, ಎನ್‌ಪಿಎಸ್‌‍ ಹೂಡಿಕೆ ಆಯ್ಕೆಗಳು, ಎಲ್‌ಪಿಜಿ ಸಿಲಿಂಡರ್‌ ಬೆಲೆ ಬದಲಾವಣೆ, ಆನ್ಲೈನ್‌ ಗೇಮಿಂಗ್‌ ನಿಯಂತ್ರಣ ಹಾಗೂ ಇಪಿಎಫ್‌ ಹಣ ಹಿಂಪಡೆಯುವ ಹೊಸ ಸೌಲಭ್ಯ ಜಾರಿಗೆ ಬರಲಿದೆ.

RELATED ARTICLES

Latest News