ಬೆಂಗಳೂರು, ಮಾ.7- ರಾಜ್ಯದಲ್ಲಿ ಜವಳಿ ಹಾಗೂ ಸಿದ್ದ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಲು ನೂತನ ಜವಳಿ ನೀತಿಯನ್ನು ರೂಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬಜೆಟ್‌ನಲ್ಲಿಂದು ಕಾರ್ಕಳ, ರಾಣೆಬೆನ್ನೂರು, ರಾಯಚೂರು, ಕಡೂರು ಹಾಗೂ ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.
ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿಯೂ ಐಟಿ ವಿಜ್ಞಾನ-ತಂತ್ರಜ್ಞಾನ ಉದ್ಯಮಶೀಲತೆ ಉತ್ತೇಜಿಸಲು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ಆಕ್ಸಿಲೇಟರ್ ಕಾರ್ಯಕ್ರಮ (ಲೀಪ್) ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಖನಿಜಗಳ ಸಾಗಾಣಿಕೆಗೆ ಪರವಾನಗಿ ನೀಡಲು ಹಾಗೂ ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಇಂಟಿಗ್ರೇಟೆಡ್ ಲೀಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಎಲ್‌ಎಂಸ್) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು.
ಪ್ರಸಕ್ತ ಸಾಲಿನಲ್ಲಿ 10 ಕಬ್ಬಿಣದ ಅದಿರಿನ ಬ್ಲಾಕ್‌ಗಳನ್ನು ಹರಾಜು ಹಾಕಿ ರಾಜಸ್ವ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಮುಂದಿನ ವರ್ಷಗಳಲ್ಲಿ ಒಟ್ಟಾರೆ 5,847 ಕೋಟಿ ರಾಜಸ್ವ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗೆ 20 ಕೋಟಿ, ಕಾರ್ಮಿಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಐಟೆಕ್ ಹರ್ವೆಸ್ಟರ್ ಯಂತ್ರೋಪಕರಣವನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ಒದಗಿಸಲು ಶುಗರ್ ಕೇನ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲು 70 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ನೇಕಾರರಿಗೆ ಆರ್ಥಿಕ ಸ್ವಾವಲಂಬನೆಗಾಗಿ ನೇಕಾರರ ಪ್ಯಾಕೆಜ್ 2.0 ಜಾರಿಗೊಳಿಸಲಾಗುವುದು. 10 ಎಚ್ ಪಿವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಮುಂದಿನ 20 ಎಚ್ ಪಿವರೆಗೂ ವಿಧಿಸಲಾಗುತ್ತಿದ್ದ ವಿದ್ಯುತ್ ಮಿತಿಯನ್ನು ಸಡಿಲಿಸಲಾಗುವುದು. ಒಟ್ಟಾರೆ 90,645 ನೇಕಾರರಿಗೆ ಉಚಿತ ವಿದ್ಯುತ್ ಹಾಗೂ ರಿಯಾಯಿತಿ ಸೌಲಭ್ಯ ಒದಗಿಸಲು 100 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.