ಬೆಂಗಳೂರು, ಜ.1- ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅನಾಹುತ ಗಳು ಸಂಭವಿಸುವುದು ಹೊಸದೇನಲ್ಲ. ಈ ಬಾರಿಯೂ ನಗರದಲ್ಲಿ ಸಣ್ಣಪುಟ್ಟ ಅವಾಂತರಗಳು ನಡೆದಿವೆ. ಅದರಲ್ಲೂ ಕುಡಿದ ಮತ್ತಿನಲ್ಲಿ ಸ್ನೇಹಿತರೇ ಗೆಳೆಯನನ್ನು ಕೊಲೆ ಮಾಡಿರುವುದು ಸೇರಿದಂತೆ ಹಲವಾರು ಅವಘಡಗಳು ನಡೆದಿವೆ. ಯುವಕನ ಕೊಲೆ, ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಪೊಲೀಸರು ಕೆನ್ನೆಗೆ ಬಾರಿಸಿರುವುದು, ಪಬ ನಲ್ಲಿ ಕನ್ನಡ ಹಾಡು ಹಾಕಿಲ್ಲವೆಂದು ಗಲಾಟೆ, ಪೊಲೀಸರ ಜೊತೆ ಯುವಕ, ಯುವತಿಯರ ವಾಗ್ವಾದ ಸೇರಿದಂತೆ ಅನೇಕ ಘಟನೆಗಳು ನಡೆದಿವೆ.
ಹೊಸ ವರ್ಷಾಚರಣೆಗಾಗಿ ಸ್ನೇಹಿತರೆಲ್ಲರೂ ಸೇರಿ ಪಾರ್ಟಿ ಮಾಡಿ ವಾಪಸ್ ಆಟೋದಲ್ಲಿ ಹಿಂದಿರುಗುತ್ತಿದ್ದಾಗ ಅವರುಗಳ ನಡುವೆ ಜಗಳವಾಗಿ ಗೆಳೆಯನನ್ನೇ ಇರಿದು ಕೊಲೆ ಮಾಡಿ ರಸ್ತೆ ಬದಿ ತಳ್ಳಿ ಪರಾರಿಯಾಗಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಶ್ರೀನಿವಾಸನಗರ ನಿವಾಸಿ ವಿಜಯ (21) ಕೊಲೆಯಾದ ದುರ್ದೈವಿ. ಈತ ವೃತ್ತಿಯಲ್ಲಿ ವೆಲ್ಡರ್.
ರಾತ್ರಿ ಹೊಸ ವರ್ಷಾಚರಣೆ ನಿಮಿತ್ತ ವಿಜಯ್ ತನ್ನ ಸ್ನೇಹಿತರೊಡನೆ ಸೇರಿ ಶ್ರೀನಿವಾಸನಗರ 80 ಅಡಿ ರಸ್ತೆ ಸಮೀಪ ಪಾರ್ಟಿ ಮಾಡಿದ್ದಾನೆ. ಪಾರ್ಟಿ ಮುಗಿಸಿಕೊಂಡು ಬೆಳಗಿನಜಾವ 2 ಗಂಟೆ ಸುಮಾರಿನಲ್ಲಿ ಆಟೋದಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ಸ್ನೇಹಿತರ ನಡುವೆಯೇ ಜಗಳವಾಗಿದೆ. ಮಾರ್ಗಮಧ್ಯೆ ಆಟೋದಲ್ಲೇ ವಿಜಯ್‍ಗೆ ಚಾಕುವಿನಿಂದ ಇರಿದು ಆಟೋದಿಂದ ರಸ್ತೆಬದಿ ಆತನನ್ನು ತಳ್ಳಿ ಪರಾರಿಯಾಗಿದ್ದಾರೆ. ಇರಿತದಿಂದಾಗಿ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ವಿಜಯ್ ಕೊನೆಯುಸಿರೆಳೆದಿದ್ದಾನೆ. ಸುದ್ದಿ ತಿಳಿದ ಹನುಮಂತನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಾನೂ ಹಿಂದೂ ಆದರೆ, ಬಿಜೆಪಿಯವರಂತೆ ಪ್ರದರ್ಶಿಸುವುದಿಲ್ಲ; ರಂಜನ್ ಸಿಂಗ್
ಹೊಸ ವರ್ಷ ಆಚರಿಸಲು ಚರ್ಚ್‍ಸ್ಟ್ರೀಟ್‍ನಲ್ಲಿ ಜಮಾಯಿಸಿದ್ದ ಜನಸಮೂಹದ ನಡುವೆ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಯುವಕನೊಬ್ಬನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೋರಮಂಗಲ ಪಬ್‍ನಲ್ಲಿ ಯುವಕನೊಬ್ಬ ಕನ್ನಡ ಸಾಂಗ್ಸ್ ಹಾಕಿಲ್ಲ ಅಂತಾ ಕುಡಿದ ಮತ್ತಿನಲಿ ಗಲಾಟೆ ಮಾಡಿದ್ದಾನೆ. ಪೊಲೀಸರು ಆತನನ್ನು ಹರಸಾಹಸಪಟ್ಟು ಸಮಾಧಾನಪಡಿಸುವಂತಾಗಿತ್ತು. ಇನ್ನೊಂದೆಡೆ ಚರ್ಚ್‍ಸ್ಟ್ರೀಟ್‍ನಲ್ಲಿ ಫೇಸ್‍ಮಾಸ್ಕ್ ಧರಿಸಿ ಹಾವಳಿ ಮಾಡ್ತಿದ್ದ ಪುಂಡರಿಗೆ ಪೊಲೀಸರು ತರಾಟೆಗೆ ತೆಗೆದುಕೊಂಡ್ರು.
ಚರ್ಚ್‍ಸ್ಟ್ರೀಟ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಒಮ್ಮೆಲೆ ನೂಕು ನುಗ್ಗಲು ಉಂಟಾಯಿತು. ತಳ್ಳಾಟ ನೂಕಾಟದ ಪರಿಸ್ಥಿತಿ ತಲೆದೋರಿತು. ಬ್ಯಾರಿಕೇಡ್‍ಗಳನ್ನು ತಳ್ಳಿ ಸಾರ್ವಜನಿಕರು ನುಗ್ಗಲು ಪ್ರಯತ್ನಿಸಿದ್ರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.
ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಬಂದಿದ್ದ ಯುವತಿಯೊಬ್ಬಳು ಅಸ್ವಸ್ಥಗೊಂಡು ಕುಸಿದುಬಿದ್ದ ಘಟನೆ ನಡೆದಿದೆ. ಕೂಡಲೇ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆ್ಯಂಬುಲೆನ್ಸ್‍ನಲ್ಲಿ ಪೊಲೀಸರು ಆಸ್ಪತ್ರೆಗೆ ರವಾನಿಸಿದರು.
ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಎಲ್ಲೇಡೆ ಪಾರ್ಟಿ ಮುಗಿದ ಬಳಿಕ ಯುವಕ, ಯುವತಿಯರು ಕುಡಿದು ತೂರಾಡಿದ್ದಾರೆ. ಎಂಜಿ ರೋಡ್, ಬ್ರಿಗೇಡ್ ರೋಡ್‍ನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಜಮಾಯಿಸಿದ್ದರು.
ಸಂಚಾರ ದಟ್ಟಣೆ:
ಹೊಸವರ್ಷ ಸ್ವಾಗತಿಸಿದ ನಂತರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಾವಿರಾರು ಜನರು ಏಕಕಾಲದಲ್ಲಿ ತಮ್ಮ ವಾಹನಗಳಲ್ಲಿ ಮನೆಗೆ ಹಿಂದಿರುಗುತ್ತಿದ್ದರಿಂದ ಎಂ.ಜಿ.ರಸ್ತೆ ಸುತ್ತಮುತ್ತಲಿನ ರಿಚ್‍ಮಂಡ್ ಸರ್ಕಲ್, ಕಬ್ಬನ್ ಪಾರ್ಕ್, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
ಸಂಚಾರ ಪೊಲೀಸರು ಸ್ಥಳದಲ್ಲಿದ್ದು ಯಾವುದೇ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಹೊಸ ವರ್ಷಾಚರಣೆಯ ಭದ್ರತೆಗಾಗಿ ಅಕಾರಿಗಳು ಸೇರಿದಂತೆ 8500 ಮಂದಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿತ್ತು.