ನಂಜನಗೂಡು,ಮಾ.21- ಆಕ್ಸಿಜನ್ ಸೌಲಭ್ಯವಿಲ್ಲದ ಸರ್ಕಾರಿ ಆಂಬುಲೆನ್ಸ್‌ನಲ್ಲಿ ಮಗು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ನಂಜನಗೂಡು ಪಟ್ಟಣದ ಶ್ರೀರಾಂಪುರ ಬಡಾವಣೆಯ ರತ್ನಮ್ಮ ಮತ್ತು ಕುಮಾರ್ ಎಂಬ ದಂಪತಿ ಮಗು ಸಾವನ್ನಪ್ಪಿದೆ.
ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಮೈಸೂರಿನ ದೊಡ್ಡಸ್ಪತ್ರೆಗೆ ತೆರಳುತ್ತಿದ್ದವೇಳೆ ಮಗು ಸಾವನ್ನಪ್ಪಿದ್ದು, ತಾಯಿಯ ರೋದನೆ ಮುಗಿಲು ಮುಟ್ಟಿದೆ. ಕಳೆದ 17ರಂದು ಹೆರಿಗೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರತ್ನಮ್ಮ ದಾಖಲಾಗಿದ್ದರು.
ಹೆರಿಗೆಯಾದ ಬಳಿಕ ಮಗು ನೀಲಿ ಬಣ್ಣಕ್ಕೆ ತಿರುಗಿದೆ. ನಂತರ ಮಗು ಸ್ಥಿತಿಯಿಂದ ಪೋಷಕರು ಕೂಡ ಆತಂಕಕ್ಕೆ ಒಳಗಾಗಿದ್ದರು. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಕ್ಕಳ ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಆಕ್ಸಿಜನ್ ಕೊರತೆಯಿದೆ ಎಂದು ತಿಳಿದಿದ್ದರೂ ಮೈಸೂರಿಗೆ ರವಾನಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಮಗು ಸಾವನ್ನಪ್ಪಿದೆ. ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷಿತನ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.