ಚೆನ್ನೈ, ಮೇ 9- ತಮಿಳುನಾಡಿನ ಈ ರೋಡ್‌ನಲ್ಲಿರುವ ಬಾವಿಯೊಂದರಲ್ಲಿ ನವವಿವಾಹಿತ ದಂಪತಿಯ ಶವಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿಗಳು ನೀರಿನಲ್ಲಿ ತೇಲು ತ್ತಿರುವ ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ತಕ್ಷಣ ಪೊಲೀಸರು ಆಗಮಿಸಿದ್ದಾರೆ.
ಪೊಲೀಸರ ಪ್ರಕಾರ, ಪುದುಕೋತುಕಾಡು ಗ್ರಾಮದ ಕಟ್ಟಡ ಕಾರ್ಮಿಕ ಶಕ್ತಿವೇಲ್ ಮತ್ತು ಇಂಡಿಯಾಂಪಾಲಯಂ ನಿವಾಸಿ ಪ್ರಿಯದರ್ಶಿನಿ ಸುಮಾರು ಏಳು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಅವರ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದರು.
ರಾತ್ರಿ, ದಂಪತಿಗಳು ಸ್ಥಳೀಯ ಗ್ರಾಮ ಉತ್ಸವದಲ್ಲಿ ಭಾಗವಹಿಸಲು ಇಂಡಿಯಾಂಪಾಲಯಂನಲ್ಲಿರುವ ಪ್ರಿಯದರ್ಶಿನಿ ಅವರ ತಾಯಿಯ ಮನೆಗೆ ಹೋಗಿದ್ದರು.ಮರುದಿನ ಬೆಳಗ್ಗೆ, ಗ್ರಾಮಸ್ಥರು ಹತ್ತಿರದ ಬಾವಿಯಲ್ಲಿ ಅವರ ಶವವನ್ನು ಕಂಡಿದ್ದಾರೆ. ಕೂಡಲೇ ಕಾಡತ್ತೂರು ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸತ್ಯಮಂಗಲಂನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ದಂಪತಿ ಸಾವಿಗೆ ಕಾರಣವಾದ ವಿಷಯ ಪತ್ತೆಮಾಡಲು ತನಿಖೆ ಮುಂದುವರೆಸಿದ್ದಾರೆ. ಇತ್ತೀಚೆಗೆ, ಮೇ 2 ರಂದು ತಮಿಳುನಾಡಿನ ಈರೋಡ್ ಜಿಲ್ಲೆಯ ತಮ್ಮ ತೋಟದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ದಂಪತಿಯನ್ನು ಕ್ರೂರವಾಗಿ ಕೊಲೆ ಮಾಡಲಾಗಿತ್ತು.