Thursday, November 21, 2024
Homeರಾಜ್ಯರಾಮೇಶ್ವರಂ ಕೆಫೆ ಬಾಂಬರ್ ಪತ್ತೆಗೆ ರಾತ್ರಿಯಿಡೀ ಕಾರ್ಯಾಚರಣೆ

ರಾಮೇಶ್ವರಂ ಕೆಫೆ ಬಾಂಬರ್ ಪತ್ತೆಗೆ ರಾತ್ರಿಯಿಡೀ ಕಾರ್ಯಾಚರಣೆ

ಬೆಂಗಳೂರು,ಮಾ.7- ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಿ ಪರಾರಿಯಾಗಿರುವ ದುಷ್ಕರ್ಮಿಗಾಗಿ ಎನ್‍ಐಎ ಮತ್ತು ಸಿಸಿಬಿ ಪೊಲೀಸ್ ಅಧಿಕಾರಿಗಳ ತಂಡಗಳು ರಾತ್ರಿ ರಾಜ್ಯದ ಹಲ ವೆಡೆ ಶೋಧ ನಡೆಸಿವೆ. ಆರೋಪಿ ಬಾಂಬ್ ಸ್ಪೋಟಿಸಿ ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸಿ ನಂತರ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ತುಮಕೂರು ತದನಂತರ ಬಳ್ಳಾರಿ, ಅಲ್ಲಿಂದ ಭಟ್ಕಳ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಸಂಚರಿಸಿ ಕೇರಳಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ತನಿಖಾ ತಂಡಗಳು ಕೇರಳ, ಗೋವಾ, ಮಹಾರಾಷ್ಟ್ರ, ಮುಂತಾದ ರಾಜ್ಯಗಳಲ್ಲಿ ಆರೋಪಿಗಾಗಿ ಶೋಧ ನಡೆಸುತ್ತಿವೆ. ಈಗಾಗಲೇ ಎನ್‍ಐಎ ತಂಡಗಳು ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ದಾಳಿ ಮಾಡಿ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿವೆ. ತನಿಖಾ ತಂಡಗಳಿಗೆ ಲಭ್ಯವಾಗಿರುವ ಮಾಹಿತಿ ಆಧಾರದಲ್ಲಿ ಆರೋಪಿಗಾಗಿ ಶೋಧ ನಡೆಸುತ್ತಿವೆ.

ಆರೋಪಿಯು ಕೆಫೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಿ ನಂತರ ಐಟಿಪಿಎಲ್ ರಸ್ತೆಯಲ್ಲಿ ಬಿಎಂಟಿಸಿ ಬಸ್ ಹತ್ತಿ ಕಾಡುಗೋಡಿಯಲ್ಲಿ ಇಳಿದು ಅಲ್ಲಿಂದ ಮೆಜೆಸ್ಟಿಕ್‍ಗೆ ಬಂದು ಅಲ್ಲಿಂದ ಮತ್ತೊಂದು ಬಸ್ ಹತ್ತಿ ರಾಜಾಜಿನಗರದ ಸುಜಾತ ನಿಲ್ದಾಣದಲ್ಲಿ ಇಳಿದಿದ್ದಾನೆ. ಸುಜಾತದಿಂದ ಕೆಎಸ್‍ಆರ್‍ಟಿಸಿ ಬಸ್ ಹತ್ತಿ ತುಮಕೂರಿಗೆ ಹೋಗಿ ಅಲ್ಲಿಂದ ಬಳ್ಳಾರಿಗೆ ಪ್ರಯಾಣಿಸಿದ್ದಾನೆ. ಅಲ್ಲಿಂದ ಮಂತ್ರಾಲಯ-ಗೋಕರ್ಣ ಬಸ್‍ನಲ್ಲಿ ಪ್ರಯಾಣಿಸಿ ಭಟ್ಕಳಕ್ಕೆ ಹೋಗಿ ಅಲ್ಲಿ ತಂಗಿದ್ದು ನಂತರ ಕೇರಳಕ್ಕೆ ಬಸ್‍ನಲ್ಲಿ ಪ್ರಯಾಣಿಸಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ.

ತುಮಕೂರಿನಲ್ಲಿ ಶೋಧ:
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸೋಟಿಸಿ ಪರಾರಿಯಾಗಿರುವ ಆರೋಪಿ ನಗರದಲ್ಲಿ ಓಡಾಡಿರುವ ಅನುಮಾನ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಆತನ ಪತ್ತೆಗಾಗಿ ಸ್ಥಳೀಯ ಪೊಲೀಸರೊಂದಿಗೆ ಎನ್‍ಐಎ ಅಧಿಕಾರಿಗಳ ತಂಡ ಶೋಧ ನಡೆಸಿದೆ. ಆರೋಪಿಯು ತುಮಕೂರಿನಲ್ಲಿ ವಾಸ್ತವ್ಯ ಹೂಡಿದ್ದನೆಂಬ ಮಾಹಿತಿ ಈ ತಂಡಕ್ಕೆ ಲಭ್ಯವಾದ ಹಿನ್ನಲೆಯಲ್ಲಿ ರಾತ್ರಿ ದಿಢೀರ್ ತೆರಳಿ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.

ಎಸ್‍ಪಿ ಅಶೋಕ್ ಹಾಗೂ ಡಿಎಸ್‍ಪಿ ಮತ್ತು ಎನ್‍ಐಎ ಅಧಿಕಾರಿಗಳು ನಗರದ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆರೋಪಿಯು ತುಮಕೂರಿನಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿರುವುದರಿಂದ ಮಹಾನಗರ ಪಾಲಿಕೆ ಆವರಣದಲ್ಲಿರುವ ಸ್ಮಾರ್ಟ್‍ಸಿಟಿಯ ಸಿಸಿಟಿವಿ ಕಂಟ್ರೋಲ್ ರೂಮ್‍ಗೆ ತೆರಳಿ ಹಲವು ಮಾಹಿತಿಗಳನ್ನು ಕಲೆ ಹಾಕಿದೆ.

ಅಲ್ಲದೆ ನಗರದ ಹಲವು ರಸ್ತೆಗಳು ಮತ್ತು ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿನ ಸಿಸಿ ಕ್ಯಾಮೆರಾಗಳ ಫುಟೇಜ್‍ಗಳನ್ನು ಪಡೆದುಕೊಂಡು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ತಡರಾತ್ರಿವರೆಗೂ ಸ್ಥಳೀಯ ಪೊಲೀಸರು ಎನ್‍ಐಎ ಅಧಿಕಾರಿಗಳ ತಂಡದೊಂದಿಗೆ ಇದ್ದು ತನಿಖೆಗೆ ಸಹಕರಿಸಿದರು. ಆರೋಪಿಯು ಯಾವ ಸ್ಥಳದಲ್ಲಿ ಉಳಿದುಕೊಂಡಿದ್ದ ಎಲ್ಲೆಲ್ಲಿ ಓಡಾಡಿದ್ದದಾನೆ. ಆರೋಪಿಗೆ ಯಾರಾದರೂ ಉಳಿದುಕೊಳ್ಳಲು ನೆರವು ನೀಡಿದ್ದಾರೆಯೆ ಅಥವಾ ಹೋಟೆಲ್‍ನಲ್ಲಿ ತಂಗಿ ಹೋಗಿದ್ದನೇ ಎಂಬಿತ್ಯಾದಿ ಮಾಹಿತಿಗಳನ್ನು ಎನ್‍ಐಎ ಅಧಿಕಾರಿಗಳ ತಂಡ ಸಂಗ್ರಹಿಸುತ್ತಿದೆ.

ಬಳ್ಳಾರಿ:
ತುಮಕೂರಿನಿಂದ ಬಳ್ಳಾರಿಗೆ ಆರೋಪಿ ಹೋಗಿರುವ ಮಾಹಿತಿ ಹಿನ್ನಲೆಯಲ್ಲಿ ಎನ್‍ಐಎ ತಂಡಗಳು ಅಲ್ಲಿಯೂ ಇಂದು ಬೆಳಗಿನ ಜಾವದವರೆಗೂ ಪರಿಶೀಲನೆ ನಡಸಿವೆ. ಬಳ್ಳಾರಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಕೇರಳ: ಆರೋಪಿಯು ಬಸ್ ಮೂಲಕ ಕೇರಳಕ್ಕೆ ಪ್ರಯಾಣಿಸಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲ್ಲಿಯೂ ಸಹ ತನಿಖಾ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿವೆ. ಈಗಾಗಲೇ ತನಿಖಾ ತಂಡಗಳು ರಾಜ್ಯದ ವಿವಿಧ ಕಡೆಗಳಲ್ಲಿ ಹಾಗೂ ಹೊರರಾಜ್ಯಗಳಲ್ಲೂ ಆರೋಪಿಗಾಗಿ ಹಗಲಿರುಳು ಹುಡುಕಾಟ ನಡೆಸುತ್ತಿವೆ.

ಘಟನೆ ಹಿನ್ನೆಲೆ:
ಮಾ.1ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಗರದ ರಾಮೇಶ್ವರಂ ಕೆಫೆಗೆ ಹೋದ ಆರೋಪಿಯು ಯಾರಿಗೂ ಸ್ವಲ್ಪವೂ ಅನುಮಾನ ಬಾರದಂತೆ ಇಡ್ಲಿ ತಿಂದು ಕೈ ತೊಳೆಯುವ ಜಾಗದಲ್ಲಿ ಟೈಮರ್ ಬಾಂಬ್ ಇದ್ದ ಬ್ಯಾಗ್ ಇಟ್ಟು ಹೋದ ಕೆಲವೇ ನಿಮಿಷಗಳಲ್ಲಿ ಬಾಂಬ್ ಸ್ಪೋಟ ಸಂಭವಿಸಿ ಮಹಿಳೆ ಸೇರಿದಂತೆ 9 ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಪೋಟದಿಂದಾಗಿ ಹೋಟೆಲ್‍ನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿತ್ತು.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಎಫ್‍ಎಸ್‍ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಂದಿನಿಂದ ರಾಜ್ಯ ಪೊಲೀಸ್ ತನಿಖಾ ತಂಡಗಳು ಎನ್‍ಐಎ ತಂಡ ಆರೋಪಿಗಾಗಿ ಶೋಧ ನಡೆಸುತ್ತಿದ್ದು, ಕಾರ್ಯಾಚರಣೆ ಚುರುಕುಗೊಂಡಿದೆ.

10 ಲಕ್ಷ ಬಹುಮಾನ: ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ ಪರಾರಿಯಾಗಿರುವ ಆರೋಪಿಯ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್‍ಐಎ ಘೋಷಿಸಿದೆ. ಆರೋಪಿಯ ಸುಳಿವು ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದೆಂದು ಎನ್‍ಐಎ ಸೂಚಿಸಿದೆ.

RELATED ARTICLES

Latest News