ನವದೆಹಲಿ,ಮೇ.17– ಮುಂಬೈ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಭಯೋತ್ಪಾದಕ ಸಂಘಟನೆ ಐಸಿಸ್‌ನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ 2023 ರಲ್ಲಿ ನಡೆದ ಐಇಡಿಗಳ ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಇಬ್ಬರು ಬೇಕಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಾಪರ್‌ವಾಲಾ ಮತ್ತು ತಲ್ಪಾ ಖಾನ್ ಎಂದು ಗುರುತಿಸಲಾಗಿದೆ.ಕಳೆದ ರಾತ್ರಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಸಿಕ್ಕಿಬಿದ್ದಿದ್ದಾರೆ. ಇಂಡೋನೇಷ್ಯಾದಲ್ಲಿ ಅಡಗಿದ್ದ ಇವರು ಐಸಿಸ್ ಸ್ವೀಪರ್ ಸೆಲ್‌ನ ಸಕ್ರಿಯ ಸದಸ್ಯರಾಗಿದ್ದು ಜಕಾರ್ತಾದಿಂದ ಭಾರತಕ್ಕೆ ಬಂದಾಗ ಕಸ್ಟಮ್ ಅಧಿಕಾರಿಗಳ ಸಹಕಾರದಿಂದ ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಇಬ್ಬರು ಆರೋಪಿಗಳು ಎರಡು ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದರು ಮತ್ತು ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಸಹ ಹೊರಡಿಸಿತ್ತು. ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.
ಹಿಂಸಾಚಾರ ಮತ್ತು ಭಯೋತ್ಪಾದನೆಯ ಮೂಲಕ ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಕಾರ್ಯಸೂಚಿಯನ್ನು ಮುಂದುವರಿಸಲು,ಭಾರತದ ಶಾಂತಿ ಮತ್ತು
ಕೋಮು ಸಾಮರಸ್ಯವನ್ನು ಕದಡುವ ಗುರಿಯೊಂದಿಗೆ ಅವರು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ಅದು ಹೇಳಿದೆ.
ಈಗಾಗಲೆ ಸರೆಯಲ್ಲಿರುವವರ ಜೊತೆ ಸೇರಿ ಕಳೆದ 2022-2023ರ ಅವಧಿಯಲ್ಲಿ ಬಾಂಬ್ ತಯಾರಿಕೆ ಮತ್ತು ತರಬೇತಿ ಕಾರ್ಯಾಗಾರವನ್ನು ಸಹ ಆಯೋಜಿಸಿದ್ದರು ಪರೀಕ್ಷಿಸಲು ನಿಯಂತ್ರಿತ ಸ್ಫೋಟವನ್ನು ನಡೆಸಿದ್ದರು .
ಭಾರತದಲ್ಲಿ ಐಸಿಸ್ ಭಯೋತ್ಪಾದಕ ಯೋಜನೆಗಳನ್ನು ವಿಫಲಗೊಳಿಸುವ ಪ್ರಯತ್ನದಲ್ಲಿ ಅದರ ಚಟುವಟಿಕೆಗಳನ್ನು ಸಕ್ರಿಯವಾಗಿ ತನಿಖೆ ನಡೆಸುತ್ತಿರುವ ಎನ್‌ಐಎ, ಈ ಹಿಂದೆ ಪ್ರಕರಣದ ಎಲ್ಲಾ 10 ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.
ಪ್ರಸ್ತುತ ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಲಾಖಾನ್ ಜೊತೆಗೆ, ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇತರರನ್ನು ಮೊಹಮ್ಮದ್ ಇಮ್ರಾನ್ ಖಾನ್, ಮೊಹಮ್ಮದ್ ಯೂನಸ್ ಸಾಕಿ, ಅಬ್ದುಲ್ ಖಾದಿರ್ ಪಠಾಣ್, ಸಿಮಾಬ್ ನಾಸಿರುದ್ದೀನ್ ಕಾಜಿ, ಜುಲ್ಟಿಕರ್ ಅಲಿ ಬರೋಡಾವಾಲಾ, ಶಮಿಲ್ ನಾಚನ್, ಅಕಿಫ್ ನಾಚನ್ ಮತ್ತು ಶಹನವಾಜ್ ಅಲಂ ಎಂದು ಗುರುತಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.