Wednesday, September 3, 2025
Homeರಾಜ್ಯಧರ್ಮಸ್ಥಳ ಪ್ರಕರಣಕ್ಕೆ ಇಡಿ ಎಂಟ್ರಿ ಬೆನ್ನಲ್ಲೇ ಎನ್‌ಐಎ ಅಖಾಡಕ್ಕೆ : ಕೆಲವು ಎನ್‌ಜಿಒಗಳಿಗೆ ಸಂಕಷ್ಟ

ಧರ್ಮಸ್ಥಳ ಪ್ರಕರಣಕ್ಕೆ ಇಡಿ ಎಂಟ್ರಿ ಬೆನ್ನಲ್ಲೇ ಎನ್‌ಐಎ ಅಖಾಡಕ್ಕೆ : ಕೆಲವು ಎನ್‌ಜಿಒಗಳಿಗೆ ಸಂಕಷ್ಟ

NIA enters Dharmasthala case: Trouble for some NGOs

ಬೆಂಗಳೂರು,ಸೆ.3– ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲು ಕೆಲವು ಎನ್‌ಜಿಒ ಹಾಗೂ ಖಾಸಗಿ ವ್ಯಕ್ತಿಗಳಿಗೆ ವಿದೇಶಿ ಹಣ ಬಂದಿರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಕೈಗೆತ್ತಿಕೊಳ್ಳಲು ಮುಂದಾಗಿರುವ ಬೆನ್ನಲ್ಲೇ ಇದೀಗ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕೂಡ ಅಖಾಡಕ್ಕಿಳಿದಿದೆ.

ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ ಪಟ್ಟು ಹಿಡಿದಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆ ಎನ್‌ಐಎಗೆ ವಹಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಧರ್ಮಸ್ಥಳ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪ ಪಡೆದು ಕೊಳ್ಳುತ್ತಿರುವುದರಿಂದ ಇದು ಪೂರ್ವನಿಯೋಜಿತ ಕುತಂತ್ರವೋ ಇಲ್ಲವೋ ಷಡ್ಯಂತ್ರವೋ ಎಂಬುದನ್ನು ಪತ್ತೆ ಮಾಡಲು ಕೇಂದ್ರ ಸರ್ಕಾರವು ವಿಶೇಷ ಆಸಕ್ತಿ ವಹಿಸಿದೆ.

ಎಸ್‌‍ಐಟಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಳಕ್ಕಿಳಿದು ತನಿಖೆ ನಡೆಸಲು ಕಷ್ಟಕರವಾಗುತ್ತದೆ. ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡು ಎಂತಹ ಪ್ರಭಾವಿಗಳನ್ನು ಕೂಡ ವಿಚಾರಣೆಗೆ ಸತ್ಯಾಂಶವನ್ನು ಬಯಲಿಗೆಳೆಯುವ ಸಾಧ್ಯತೆ ಇರುತ್ತದೆ.

ಪ್ರಕರಣದ ಪ್ರಮುಖ ಆರೋಪಿಯಾಗಿ ಪ್ರಸ್ತುತ ಎಸ್‌‍ಐಟಿ ವಶದಲ್ಲಿರುವ ಚಿನ್ನಯ್ಯ ತಾನು ಕೆಲವರ ಜೊತೆ ಬುರುಡೆ ತೆಗೆದುಕೊಂಡು ದೆಹಲಿಗೆ ಹೋಗಿ ಪ್ರಭಾವಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದೆ ಎಂದು ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.ಇದೀಗ ಈ ಪ್ರಭಾವಿ ಯಾರು? ಈತನ ಹಿನ್ನಲೆ ಏನು? ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿದ್ದಾನೆ? ಈತನ ಹಿಂದೆ ಯಾರ್ಯಾರು ಇದ್ದಾರೆ ಎಂಬುದು ಸೇರಿದಂತೆ ಇಂಚಿಂಚು ಮಾಹಿತಿಯನ್ನು ಹೊರತೆಗೆಯಲು ಎನ್‌ಐಎ ಮುಂದಾಗಿದೆ.

ಈ ಹಿಂದೆ ರವಿಶಂಕರ್‌ ಗುರೂಜಿಯ ಆರ್ಟ್‌ ಆಫ್‌ ಲೀವಿಂಗ್‌, ಕೇರಳದ ಮಾತಾ ಅಮೃತಾನಂದಮಯಿ, ಶಬರಿಗಿರಿ ಅಯ್ಯಪ್ಪ ಸ್ವಾಮಿ, ಮಹಾರಾಷ್ಟ್ರದ ಶನಿಸಿಂಗ್ನಾಪುರ್‌ ಸೇರಿದಂತೆ ಕೆಲವು ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರಗಳ ಮೇಲೆ ವ್ಯವಸ್ಥಿತವಾದ ಷಡ್ಯಂತ್ರ ನಡೆದಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು.

ರಂಗಪ್ರವೇಶಿಸಿದ ಸಚಿವರು
ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ವಿರೋಧಪಕ್ಷಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ ಈ ಪ್ರಕರಣವನ್ನು ತಾರ್ಕಿಕ ತಿರುವಿಗೆ ಕೊಂಡೊಯ್ಯಲು ಕೇಂದ್ರ ಸಚಿವರೊಬ್ಬರು ಮುಂದಾಗಿದ್ದಾರೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಈಗಾಗಲೇ ಸಂಘ ಪರಿವಾರ ಮತ್ತು ಬಿಜೆಪಿ ಅಗ್ರನಾಯಕರ ಜೊತೆ ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯ ಸಚಿವರೊಬ್ಬರು ಮಾಹಿತಿ ಕಲೆ ಹಾಕಿದ್ದು, ಗೃಹಸಚಿವ ಅಮಿತ್‌ ಶಾ ಅವರಿಗೆ ಮಾಹಿತಿ ನೀಡಲಿದ್ದಾರೆ.

ಈಗಾಗಲೇ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಮಾಹಿತಿ ಮತ್ತು ದಾಖಲೆ ಕಲೆ ಹಾಕಿರುವ ಸಚಿವರು ದಾಖಲೆ ಸಮೇತ ಎರಡು ಮೂರು ದಿನಗಳಲ್ಲಿ ಅಮಿತ್‌ ಶಾ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆಂದು ಗೊತ್ತಾಗಿದೆ.

ಎರಡು ಎನ್‌ಜಿಒಗಳಿಗೆ ಸಂಕಷ್ಟ
ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯದ ಎರಡು ಎನ್‌ಜಿಒಗಳಿಗೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಬೆಂಗಳೂರು ಹಾಗೂ ಮೈಸೂರು ಮೂಲದ ಈ ಎರಡು ಎನ್‌ಜಿಒಗಳು ಕಳೆದ ಎರಡು ವರ್ಷಗಳ ಶಿಕ್ಷಣ, ಮಕ್ಕಳ ಹಕ್ಕುಗಳು, ನೊಂದವರಿಗೆ ಸಹಾಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೆಲಸ ಮಾಡುತ್ತಿವೆ.

ಈ ಹಿಂದೆ ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಮುಖಂಡೊರಬ್ಬರ ವಿರುದ್ಧ ಕೇಳಿಬಂದಿದ್ದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಈ ಸಂಸ್ಥೆ ವಿಶೇಷ ಆಸಕ್ತಿ ವಹಿಸಿ ದೂರು ನೀಡಿತ್ತು.
ಇದೀಗ ಧರ್ಮಸ್ಥಳ ಪ್ರಕರಣದಲ್ಲೂ ಈವೆರಡು ಎನ್‌ಜಿಒಗಳಿಗೆ ವಿದೇಶದಿಂದ ದೊಡ್ಡ ಮಟ್ಟದ ದೇಣಿಗೆ ಬಂದಿದೆ ಎಂಬ ಆರೋಪ ಕೇಳಿಬಂದಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘಿಸಿ ಹಣ ಪಡೆದಿದ್ದರ ಆರೋಪದ ಹಿನ್ನಲೆಯಲ್ಲಿ ಈ ಎನ್‌ಜಿಒ ಚಟುವಟಿಕೆಗಳ ಮೇಲೆ ಇಡಿ ಕಣ್ಣಿಟ್ಟಿದೆ. ಏಕಕಾಲಕ್ಕೆ ಇಡಿ ಮತ್ತು ಎನ್‌ಐಎ ರಂಗಪ್ರವೇಶ ಮಾಡಿದರೆ ಈ ಎನ್‌ಜಿಒಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News