ಮುಂಬೈ,ಡಿ.9- ಐಸಿಸ್ ಭಯೋತ್ಪಾದನಾ ಘಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಭಯೋತ್ಪಾದನಾ ನಿಗ್ರಹ ದಳ ಇಂದು ಬೆಳಗ್ಗೆ ಮಹಾರಾಷ್ಟ್ರದ 40 ಸ್ಥಳಗಳಲ್ಲಿ ದಾಳಿ ನಡೆಸಿ 13 ಜನರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲೂ ದಾಳಿ ಮಾಡಿ ಓರ್ವ ಶಂಕಿತ ವ್ಯಕ್ತಿಯನ್ನು ವಿಚಾರಣೆ ನಡೆಸಿದೆ.
ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿರುವ ಮನೆಯೊಂದರ ಮೂರನೇ ಮಹಡಿಯಲ್ಲಿ ವಾಸವಾಗಿರುವ ಆಲಿ ಅಬ್ಬಾಸ್ ಅವರ ಮನೆ ಮೇಲೆ ಇಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಎನ್‍ಐಎ ಅಧಿಕಾರಿಗಳು ದಾಳಿ ಮಾಡಿ ಅವರನ್ನು ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಮುಂಬೈ ಮೂಲದ ಆಲಿ ಅಬ್ಬಾಸ್ ಕಳೆದ ನಾಲ್ಕು ವರ್ಷಗಳ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದು, ಇವರಿಗೆ ಮೂರು ಮಕ್ಕಳಿದ್ದಾರೆ. ಈ ಹಿಂದೆ ಡಾಟಾ ಕನ್ಸಲ್ಟೆನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಕರೋನ ನಂತರ ಕೆಲಸ ಬಿಟ್ಟಿದ್ದರು. ಇವರ ಪತ್ನಿ ಕ್ಲಿನಿಕ್ ನಡೆಸುತ್ತಾರೆ.
ಇತ್ತೀಚೆಗೆ ಆಲಿ ಅಬ್ಬಾಸ್ ವಾಟ್ಸಪ್ ಗ್ರೂಪ್ ಮಾಡಿಕೊಂಡು ಪ್ರಚೋದನಾ ಹೇಳಿಕೆ ಕಳುಹಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಎನ್‍ಐಎ ಅಧಿಕಾರಿಗಳು ಇಂದು ಅವರ ಮನೆ ಮೇಲೆ ದಾಳಿ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಥಾಣೆ, ಪುಣೆ, ಮೀರಾ ಭಯಂದರ್ ಸೇರಿದಂತೆ 40 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸ್ಥಳಗಳಲ್ಲಿ ಹೆಚ್ಚಿನವು ಥಾಣೆ ಗ್ರಾಮಾಂತರ (31) ಮತ್ತು ಥಾಣೆ ನಗರದಲ್ಲಿ (9), ಮುಂಬೈನ ಪಕ್ಕದಲ್ಲಿದೆ. ಪುಣೆಯಲ್ಲಿ, ಎರಡು ಸ್ಥಳಗಳಲ್ಲಿ ಮತ್ತು ಮೀರಾ ಭಯಂದರ್‍ನಲ್ಲಿ ಒಂದು ಸ್ಥಳದ ಮೇಳೆ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಸ್ಸಾಮಿ ಮುಸ್ಲಿಮರ ಆರ್ಥಿಕ ಮೌಲ್ಯಮಾಪನಕ್ಕೆ ನಿರ್ಧಾರ
ಸ್ಪೋಟಕಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿರುವ ಶಂಕಿತ ಆರೋಪಿ – ಆಕಿಫ್ ಅತೀಕ್ ನಾಚನ್ – ಕಳೆದ ಆಗಸ್ಟ್‍ನಲ್ಲಿ ಐಸಿಸ್ ಭಯೋತ್ಪಾದನಾ ಘಟಕದ ಪ್ರಕರಣದಲ್ಲಿ ಆರನೇ ಆರೋಪಿಯನ್ನಾಗಿ ಬಂಧಿಸಲಾಗಿತ್ತು.ಮುಂಬೈನ ತಬಿಶ್ ನಾಸರ್ ಸಿದ್ದಿಕಿ, ಪುಣೆಯ ಜುಬೈರ್ ನೂರ್ ಮೊಹಮ್ಮದ್ ಶೇಖ್ ಅಲಿಯಾಸ್ ಅಬು ನುಸೈಬಾ ಮತ್ತು ಅದ್ನಾನ್ ಸರ್ಕಾರ್ ಮತ್ತು ಥಾಣೆಯ ಶಾರ್ಜೀಲ್ ಶೇಖ್ ಮತ್ತು ಜುಲಿಕರ್ ಅಲಿ ಬರೋಡಾವಾಲಾ ಅವರನ್ನು ಕಳೆದ ತಿಂಗಳು ಏಜೆನ್ಸಿ ಬಂಧಿಸಿತ್ತು.
ಐಸಿಸ್ ಸಂಪರ್ಕ ಮಾಹಿತಿ ಹಿನ್ನಲೆ: ದಾಳಿ ಶಂಕಿತ ಉಗ್ರರು ವಿದೇಶಿ ಐಸಿಸ್ ಹ್ಯಂಡ್ಲರ್‍ಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪ ಕೇಳಿಬಂದಿದ್ದು, ಭಾರತದಲ್ಲಿ ಐಸಿಸ್ ವಿಚಾರಧಾರೆ ಹರಡುವ ಪ್ರಯತ್ನ ಮಾಡುತ್ತಿದ್ದ ಹಿನ್ನಲೆಯಲ್ಲಿ ಎನ್‍ಐಎ ಅಧಿಕಾರಿಗಳು ಈ ದಾಳಿ ಮಾಡಿದ್ದಾರೆ.
ಈ ಹಿಂದೆ ಜುಲೈನಲ್ಲಿ ಪುಣೆ ಪೊಲೀಸರು ಅಮೀರ್ ಅಬ್ದುಲ್ ಹಮೀದ್‍ಖಾನ್ ಹಾಗೂ ಮೊಹ್ಮದ ಯಾಕೂಬ್ ಸಾಕಿ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಬ್ಬರೂ ಐಸಿಸ್ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ತನಿಖೆ ಆರಂಭಿಸಿದರು. ಶಂಕಿತ ಉಗ್ರರು ಕರ್ನಾಟಕ-ಮಹಾರಾಷ್ಟ್ರ ಗಡಿಯ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ ಮಾಡಿಸಿದ್ದರು ಎಂಬ ಅಂಶ ಬಯಲಾಗಿತ್ತು. ಹೀಗಾಗಿ ಎನ್‍ಐಎ ಅಕಾರಿಗಳು ಈ ದಾಳಿ ಮಾಡಿದ್ದಾರೆ.