ಬೆಂಗಳೂರು, ಫೆ.20- ಚಿಕನ್ ಅಂಗಡಿಯೊಂದರ ಮುಂದೆ ನೈಜೀರಿಯಾ ಪ್ರಜೆಯೊಂದಿಗೆ ಸ್ಥಳೀಯ ವ್ಯಕ್ತಿ ಗಲಾಟೆ ಮಾಡಿ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಹಾಡಹಗಲೇ ನಡೆದಿದೆ.
ನೈಜೀರಿಯಾ ದೇಶದ ಪ್ರಜೆ ಅದ್ವಾಲೆ ಸಿಕ್ರು (51) ಕೊಲೆಯಾದ ದುರ್ದೈವಿ. ನಿನ್ನೆ ಬೆಳಗ್ಗೆ 11.30ರ ಸುಮಾರಿನಲ್ಲಿ ಬಾಗಲೂರು ಕಾಲೋನಿ ಸಮೀಪದ ಬೆಳ್ಳಹಳ್ಳಿಯಲ್ಲಿರುವ ಹೆಚ್‌ಜಿಎನ್ ಚಿಕನ್ ಅಂಗಡಿಗೆ ಚಿಕಿನ್ ತೆಗೆದುಕೊಂಡು ಹೋಗಲು ನೈಜೀರಿಯಾ ಪ್ರಜೆ ಬಂದಿದ್ದಾರೆ.
ಆಗ ಆರೋಪಿ ಯಾಸೀನ್ ಖಾನ್ ಅಲಿಯಾಸ್ ಡ್ಯಾಗನ್ ಎಂಬಾತ ಯಾವುದೋ ವಿಚಾರಕ್ಕೆ ಅವರ ಜೊತೆ ಜಗಳವಾಡಿ ಹಲ್ಲೆ ಮಾಡಿದ್ದಾನೆ. ಇದರಿಂದ ಹೆದರಿದ ನೈಜೀರಿಯಾ ಪ್ರಜೆ ಸ್ಥಳದಿಂದ ಹೋಗುತ್ತಿದ್ದಂತೆ ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಬಂಡೆ ಮೇಲೆ ಮಲಗಿಸಿ ಪರಾರಿಯಾಗಿದ್ದನು.
ವಿಷಯ ತಿಳಿಯುತ್ತಿದ್ದಂತೆ ಬಾಗಲೂರು ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.