ರಾಮನಗರ,ಜ.24- ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ಪೀಕರಿಸಿ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ರಾಮನಗರ ಶಾಸಕರ ಭೂಕಬಳಿಕೆ ವಿರುದ್ದ ಜೆಡಿಎಸ್ ಯುವಕ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರದ ದಾಸೇಗೌಡನದೊಡ್ಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮ ಹಾಗೂ ನೂತನ ನಾಗ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಉಲ್ಲಂಘನೆಯಾಗಿದೆ. ರಾಮನಗರ ಶಾಸಕರು 67 ಎಕರೆ ಜಮೀನು ಲಪಟಾಯಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಅಲ್ಲಿನ ರೈತರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರೈತರಿಗೆ ದ್ರೋಹ ಮಾಡ್ತಿದ್ದಾರೆ.
ಇದಕ್ಕೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಎಂದು ಶಾಸಕರ ವಿರುದ್ಧ ಕಿಡಿಕಾರಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ನೋಡಿದ್ದೀರಿ. ಜನ ಈ ಜಿಲ್ಲೆ ಮಾತ್ರವಲ್ಲ, ಎಲ್ಲಾ ಜಿಲ್ಲೆಯಲ್ಲೂ ಇಂತಹ ಹಾವಳಿ ಹೆಚ್ಚಾಗಿದೆ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.