ಬೆಂಗಳೂರು,ಏ.22- ರಾಜ್ಯದೆಲ್ಲೆಡೆ ಇರುವ ಐತಿಹಾಸಿಕ ಸ್ಥಳಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ಶೀಘ್ರವೇ ನಿಲ್ಲಿಸಿ ಸರಿಯಾದ ನಿರ್ವಹಣೆ ಮಾಡಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಒಂದಾನೊಂದು ಕಾಲದಲ್ಲಿ ಮುತ್ತು, ರತ್ನಗಳನ್ನು ಬೀದಿ ಬೀದಿಯಲ್ಲಿ ಮಾರುವಷ್ಟು ಸಂಪದ್ಭರಿತವಾಗಿದ್ದ ವಿಜಯನಗರದ ಸಾಮ್ರಾಜ್ಯದ ಪಾರಂಪರಿಕ ಕಟ್ಟಡಗಳು ಕರ್ನಾಟಕದ ಪ್ರವಾಸೋದ್ಯಮದ ಕೇಂದ್ರ ಆಕರ್ಷಣೆಯಾಗಿದೆ ಎಂದಿದ್ದಾರೆ.
ನಮ್ಮ ನಾಡಿನ ಹೆಗ್ಗಳಿಕೆಯಾದ ಶ್ರೀಕೃಷ್ಣದೇವರಾಯರ ಸಮಾಧಿ ಇಂದು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಮಾರ್ಪಾಡಾಗಿರುವುದು ಅವರಿಗೆ ಮಾಡಿದ ಅವಮಾನ. ಇವತ್ತು ಮಾಧ್ಯಮಗಳಲ್ಲಿ ಬಿತ್ತರಿಸಿದ ಸುದ್ದಿಯನ್ನು ನೋಡಿ ಇತಿಹಾಸ ತಜ್ಞರಷ್ಟೇ ಅಲ್ಲದೆ, ನಾಡಿನ ಜನತೆಯೂ ಕೂಡ ದುಃಖಿತರಾಗಿದ್ದಾರೆ. ಆನೆಗುಂದಿ, ಹಂಪಿ ಹಾಗೂ ಇತರೆ ಪ್ರವಾಸಿ ತಾಣಗಳು ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಉಚಿತ ಬಸ್, ಉಚಿತ ಕರೆಂಟ್ ಗಾಗಿ ಹಣಕಾಸನ್ನು ಹೊಂದಾಣಿಕೆ ಮಾಡುತ್ತಿರುವ ಅಡ್ಡಸ್ಟೆಂಟ್ ಸರ್ಕಾರ, ರಾಜ್ಯದ ಪ್ರವಾಸಿತಾಣಗಳನ್ನು ನಿರ್ಲಕ್ಷಿಸುತ್ತಿರುವುದು ಪ್ರವಾಸೋದ್ಯಮ ಇಲಾಖೆಯ ಅಸಮರ್ಥತೆಯನ್ನು ಪ್ರದರ್ಶಿಸುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ರಾಜ್ಯದ ಐತಿಹಾಸಿಕ ಸ್ಥಳಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.