ಬೆಂಗಳೂರು, ಮೇ 11-ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ರಿಕ್ತ ಪರಿಸ್ಥಿತಿಯ ನಡುವೆ ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು. ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ರಾಜ್ಯದ ಈ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಭಯೋತ್ಪಾದಕರು ಪಹಲ್ಲಾಮ್‌ನಲ್ಲಿ ಪ್ರವಾಸಿಗರ ಮೇಲೆ ಪೈಶಾಚಿಕ ದಾಳಿ ನಡೆಸಿದ ನಂತರ ಭಾರತವು ನೆರೆಯ ರಾಷ್ಟಕ್ಕೆ ತಕ್ಕ ತಿರುಗೇಟು ನೀಡಿತ್ತು. ಈ ಸಂದರ್ಭದಲ್ಲಿ ಯುದ್ಧ ಸನ್ನಿವೇಶ ತಲೆದೋರಿತ್ತು. ತಮ್ಮನ್ನು ರಕ್ಷಣೆ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಶುಕ್ರವಾರದಂದು ನಾನು ಚನ್ನಪಟ್ಟಣದ ಕಾರ್ಯಕ್ರಮದಲ್ಲಿ ಭಾವಿಯಾಗಿದ್ದ ಸಂದರ್ಭದಲ್ಲಿ ತಗಚಗೆರೆ ಗ್ರಾಮದ ಜೆಡಿಎಸ್ ಮುಖಂಡರು ಈ ಬಗ್ಗೆ ಮನವಿ ಮಾಡಿದರು. ತಮ್ಮ ಪುತ್ರ ಹರ್ಷಿತ್ ಅವರು ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದು, ಯುದ್ಧ ಭೀತಿಯಿಂದ ಅವರನ್ನು ಕರ್ನಾಟಕಕ್ಕೆ ಕರೆತರಲು ನನ್ನ ಸಹಾಯ ಕೋರಿದರು. ಅಲ್ಲದೆ, ಕರ್ನಾಟಕದ ಇನ್ನೂ ಹಲವಾರು ವಿದ್ಯಾರ್ಥಿಗಳು ಅಲ್ಲಿ ಓದುತ್ತಿರುವ ಮಾಹಿತಿ ಸಿಕ್ಕಿತು.
ಕೂಡಲೇ ನಾನು ಈ ವಿಷಯವನ್ನು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದಾಗ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು ಹಾಗೂ ಮಕ್ಕಳ ರಕ್ಷಣೆಗಾಗಿ ತಮ್ಮ ಸಚಿವಾಲಯದ ಅಧಿಕಾರಿಗಳನ್ನು ನಿಯೋಜಿಸಿದರು. ಈ ಮೂಲಕ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕದ 13 ವಿದ್ಯಾರ್ಥಿಗಳನ್ನು ಮರಳಿ ನಮ್ಮ ನಾಡಿಗೆ ಕರೆತರುವ ವ್ಯವಸ್ಥೆಯನ್ನು ತ್ವರಿತಗತಿಯಲ್ಲಿ ಮಾಡಲಾಯಿತು ಎಂದು ನಿಖಿಲ್ ಅವರು ತಿಳಿಸಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ಒಮ್ಮುವಿನಿಂದ ಹೊರಟು ನಿನ್ನೆ ರಾತ್ರಿ ನವದೆಹಲಿ ತಲುಪಿದ್ದರು. ಅಲ್ಲಿಂದ ಅವರೆಲ್ಲರನ್ನೂ ಬೆಂಗಳೂರಿಗೆ ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಲಾಯಿತು. ಕಾಶ್ಮೀರದಿಂದ ಕರ್ನಾಟಕಕ್ಕೇ ಮರಳುತ್ತಿರುವ ವಿದ್ಯಾರ್ಥಿಗಳ ಜೊತೆಯಲ್ಲಿರುವ ಚನ್ನಪಟ್ಟಣ ತಾಲ್ಲೂಕಿನ ವಿದ್ಯಾರ್ಥಿ ಹರ್ಷಿತ್ ಅವರೊಂದಿಗೆ ವಿಡಿಯೋ ಕರೆ ಮಾಡಿ ಎಲ್ಲರ ಯೋಗಕ್ಷೇಮ ವಿಚಾರಿಸಿದೆ ಎಂದಿದ್ದಾರೆ. ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆತರಲು ಸಹಾಯ ಮಾಡಿದ ಎಲ್ಲಾ ಕೇಂದ್ರ ಸರ್ಕಾರದ ಇಲಾಖೆಯ ಅಧಿಕಾರಿಗಳಿಗೂ ಧನ್ಯವಾದಗಳನ್ನು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.