ಬೆಂಗಳೂರು, ಸೆ.29- ಎಡಿಜಿಪಿ ಎಂ.ಚಂದ್ರಶೇಖರ್ ಬರೆದಿರುವ ಪತ್ರದ ಹಿಂದೆ ಸಾಕಷ್ಟು ಕೈವಾಡವಿದೆ.ಅವರ ಬೆನ್ನ ಹಿಂದೆ ನಿಂತು ಈ ರೀತಿ ಪತ್ರ ಬರೆಯುವುದಕ್ಕೆ ಪ್ರೇರಣೆಕೊಟ್ಟಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜತೆ ಮಾತಾಡಿದ ಅವರು, ಅಧಿಕಾರಿಗಳು ಸರ್ಕಾರದ ಕೈಗೊಂಬೆ ರೀತಿ ವರ್ತಿಸುತ್ತಿದ್ದು, ಇದು ಬಹಳ ದಿನ ನಡೆಯುವುದಿಲ್ಲ. ಈ ಹಿಂದೆ ಸಾಕಷ್ಟು ಸರ್ಕಾರಗಳು ರಾಜ್ಯದಲ್ಲಿ ಆಡಳಿತ ಮಾಡಿವೆ. ಆದರೆ, ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಈ ರೀತಿ ಆಡಳಿತ ಮಾಡುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಹೀಗಾಗಿ ಇದ್ಯಾವುದಕ್ಕೂ ಭಯಪಡುವ ಅಗತ್ಯ ಇಲ್ಲ. ಅವರು ಇಂತಹ ನೂರು ಪತ್ರಗಳನ್ನು ಬರೆಯಲಿ, ಅಧಿಕಾರ ಶಾಶ್ವತ ಅಲ್ಲ, ಇವರು ತೋರಿಸಿಕೊಟ್ಟಿರುವ ದಾರಿ ದ್ವೇಷದ ರಾಜಕಾರಣ ಮುಂದುವರೆಸಬೇಕಾ? ಅಧಿಕಾರದಲ್ಲಿದ್ದಾಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ಈ ರೀತಿ ಮಾಡಿದಾರೆಯೇ? ಎಂದು ಅವರು ಕಿಡಿಕಾರಿದರು.
ನಿನ್ನೆ ಬರೆದಿರುವ ಆ ಪತ್ರದಲ್ಲಿ ಏನೇನು ಉಲ್ಲೇಖಿಸಿದ್ದಾರೆ ಎಂಬುದನ್ನು ನೋಡಿದಾಗ ಅದರ ಹಿಂದೆ ಯಾವ ಯಾವ ವ್ಯಕ್ತಿಗಳು ಅವರಿಗೆ ಪ್ರೇರೇಪಣೆ ಕೊಟ್ಟಿದ್ದಾರೆ ಅನ್ನುವುದು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದರು.