Sunday, September 8, 2024
Homeರಾಜ್ಯಯಾರನ್ನು ಓಲೈಸಲು ರಾಮನಗರ ಹೆಸರು ಬದಲಿಸುತ್ತಿದ್ದೀರಿ..? : ನಿಖಿಲ್‌ ಪ್ರಶ್ನೆ

ಯಾರನ್ನು ಓಲೈಸಲು ರಾಮನಗರ ಹೆಸರು ಬದಲಿಸುತ್ತಿದ್ದೀರಿ..? : ನಿಖಿಲ್‌ ಪ್ರಶ್ನೆ

ಬೆಂಗಳೂರು,ಜು.10- ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವುದಕ್ಕೆ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್‌ ಕುಮಾರ ಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇವಲ ಕೆಲವರನ್ನು ತುಷ್ಟೀಕರಣ ಮಾಡಲು ಮಾತ್ರ ರಾಮನಗರದ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಪುರಾಣ ಪ್ರಸಿದ್ಧವಾದ ರಾಮನಗರ ಹೆಸರನ್ನು ಕಿತ್ತುಹಾಕಿ, ಅದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದರಲ್ಲಿ ಯಾವ ಹಿಡೆನ್‌ ಅಜೆಂಡಾ ಅಡಗಿದೆಯೋ ಗೊತ್ತಿಲ್ಲ. ಆದರೆ, ಯಾರನ್ನು ಓಲೈಸಲು ರಾಮನಗರ ಹೆಸರಿಗೆ ಗೇಟ್‌ ಪಾಸ್‌‍ ನೀಡಲಾಗುತ್ತಿದೆ ಎನ್ನುವ ಒಳಗುಟ್ಟು ಮಾತ್ರ ರಟ್ಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ದಂಧೆಕೋರರಿಗೆ ಜಿಲ್ಲೆಯನ್ನು ಸ್ವರ್ಗವನ್ನಾಗಿ ಮಾಡುವುದು ಈ ಷಡ್ಯಂತ್ರ್ಯದ ಕರಾಳಮುಖ. ಕೆಲವರ ತುಷ್ಟೀಕರಣ ಮತ್ತೊಂದು ಮುಖ. ರಾಜಕೀಯವಾಗಿ ಬಹಳ ಎತ್ತರದ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಹೆಗ್ಗುರುತನ್ನೇ ಸರ್ವನಾಶ ಮಾಡುವ ಹುನ್ನಾರ ನಡೆದಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ವಿಧಾನಸೌಧದ ಶಿಲ್ಪಿ ಕೆಂಗಲ್‌ ಹನುಮಂತಯ್ಯನವರು, ಈ ದೇಶದ ಪ್ರಧಾನಿಗಳಾಗಿದ್ದ ಹೆಚ್‌.ಡಿ. ದೇವೇಗೌಡರು, ಎರಡು ಬಾರಿ ರಾಜ್ಯ ಮುಖ್ಯಮಂತ್ರಿಗಳಾಗಿದ್ದ ಹೆಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದರು. ಜಿಲ್ಲೆಯ ಹೆಸರು ಬದಲಿಸಲು ಹೊರಟವರು ಮೊದಲು ಈ ಇತಿಹಾಸ ಅರಿತರೆ ಒಳ್ಳೆಯದು. ನಮ ರಾಮನಗರ ನಮ ಹೆಮ್ಮೆ ಎಂದು ಹೇಳಿದ್ದಾರೆ.

RELATED ARTICLES

Latest News