Thursday, December 19, 2024
Homeರಾಜಕೀಯ | Politicsನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ..?

ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ..?

Nikhil Kumaraswamy to be JDS state president..?

ಬೆಂಗಳೂರು, ಡಿ.8- ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಪಕ್ಷದ ಸಂಘಟನೆ ಹೊಣೆಗಾರಿಕೆಯನ್ನು ಈಗಾಗಲೇ ನಿಖಿಲ್ ಕುಮಾರಸ್ವಾಮಿಗೆ ಪಕ್ಷದ ವರಿಷ್ಠರು ನೀಡಿದ್ದಾರೆ. ಸದಸ್ಯ ನೋಂಡಣಿ ಅಭಿಯಾನವನ್ನು ರಾಜ್ಯದಲ್ಲಿ ಆರಂಭಿಸಿದ್ದು ಅದರ ಉಸ್ತುವಾರಿಯನ್ನು ನಿಖಿಲ್ ಕುಮಾರಸ್ವಾಮಿ ವಹಿಸಿಕೊಂಡಿದ್ದಾರೆ.

ಈ ಸಂಬಂಧ ರಾಜ್ಯದ ಹಲವೆಡೆ ಅವರು ಪ್ರವಾಸ ಕೈಗೊಂಡು ಸದಸ್ಯತ್ವ ನೋಂದಣಿಗೆ ಚಾಲನೆಯನ್ನೂ ನೀಡಿದ್ದಾರೆ. ರಾಜ್ಯಾಧ್ಯಕ್ಷರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ಪಕ್ಷ ಸಂಘಟನೆಯ ಹೊಣೆಯನ್ನು ನಿಖಿಲ್ ಅವರಿಗೆ ವಹಿಸಲಾಗಿದೆ. ಈ ವಿಚಾರವನ್ನು ಕುಮಾರಸ್ವಾಮಿ ಅವರೇ ಇತ್ತೀಚೆಗೆ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಯಲ್ಲಿ ಪರಾಜಯ ಹೊಂದಿರುವ ನಿಖಿಲ್ ಕುಮಾರಸ್ವಾಮಿ ಅವರು ಮನೆಯಲ್ಲಿ ಸುಮನೆ ಕೂರುವುದಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ. ಅವರು ಭವಿಷ್ಯದ ಪಕ್ಷದ ನಾಯಕರಾಗುತ್ತಾರೆ ಎಂಬ ವಿಶ್ವಾಸವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವ್ಯಕ್ತಪಡಿಸಿದ್ದಾರೆ. ಮಕರ ಸಂಕಾಂತ್ರಿ ಹಬ್ಬದ ಬಳಿಕ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದೆ ಎಂದು ಜೆಡಿಎಸ್ ಉನ್ನತ ಮೂಲಗಳು ತಿಳಿಸಿವೆ.

2025ರಲ್ಲಿ ನಡೆಯಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಿಂದಲೇ ನಿಖಿಲ್ಗೆ ಪಕ್ಷದ ಜವಾಬ್ದಾರಿ ನೀಡಲಾಗುತ್ತದೆ. ಆ ಮೂಲಕ ಚುನಾವಣೆಯ ಜತೆಗೆ ಪಕ್ಷ ಸಂಘಟನೆಯ ಹೊಣೆಗಾರಿಕೆಯನ್ನು ವಹಿಸಲಾಗುತ್ತದೆ.

ನಿರಂತರ ಮೂರು ಚುನಾವಣೆಯಲ್ಲಿ ಸೋತಿರುವ ನಿಖಿಲ್ ಅವರನ್ನು ರಾಜಕೀಯ ನಾಯಕನಾಗಿ ಬೆಳೆಸುವ ಉದ್ದೇಶ ಜೆಡಿಎಸ್ ವರಿಷ್ಠರಿಗೆ ಇದೆ. ಈಗಾಗಲೇ ನಿಖಿಲ್ ಸೋಲಿನ ಬಗ್ಗೆ ಪಕ್ಷದಲ್ಲಿ ಆತಾವಲೋಕನ ಸಭೆಗಳನ್ನು ನಡೆಸಲಾಗಿದೆ. ಪಕ್ಷದ ಜವಾಬ್ದಾರಿಯನ್ನು ನಿಖಿಲ್ಗೆ ನೀಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

ನವದೆಹಲಿಯಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ದಾಸ್ ಅಗರವಾಲ್ ಸೇರಿದಂತೆ ಹಲವು ಬಿಜೆಪಿ ಕೇಂದ್ರ ನಾಯಕರನ್ನು ನಿಖಿಲ್ ಭೇಟಿಯಾಗಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಎನ್ಡಿಎ ಮೈತ್ರಿ ಕೂಟವನ್ನು ಜೆಡಿಎಸ್ ಸೇರಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಸಲಹೆ ಹಾಗೂ ಸಹಕಾರವನ್ನು ಅವರು ಕೋರಿದ್ದಾರೆ ಎನ್ನಲಾಗಿದೆ.

RELATED ARTICLES

Latest News