ಹಾಸನ, ಫೆ.20- ಇರುವುದು ಒಂದೇ ಭೂಮಿ, ಒಂದೇ ಜಮೀನು. ಅದು ಕೇತಗಾನಹಳ್ಳಿಯಲ್ಲಿ ಕೃಷಿಗಾಗಿ ಖರೀದಿಸಿದ್ದು. ಕಾನೂನಾತ್ಮಕವಾಗಿ ಯಾವ ರೀತಿ ಹೋರಾಟ ಮಾಡಬೇಕು ಮಾಡುತ್ತೇವೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಖಾಸಗಿ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇತಗಾನಹಳ್ಳಿ ನ್ಯಾಯಾಲಯದ ಮೂಲಕ ಜಮೀನು ಸರ್ವೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 1985ರಲ್ಲಿ ಕೇತಗಾನಹಳ್ಳಿಯಲ್ಲಿ ತಂದೆ ಕುಮಾರಸ್ವಾಮಿ ಅವರು ಜಮೀನು ಖರೀದಿ ಮಾಡಿದ್ದರು. ಆಗ ರಾಜಕೀಯಕ್ಕೆ ಅವರು ಬಂದಿರಲಿಲ್ಲ. ಸಿನಿಮಾ ಹಂಚಿಕೆದಾರರಾಗಿ ವೃತ್ತಿ ಪ್ರಾರಂಭಿಸಿದ್ದರು.
ಅದರಲ್ಲಿ ದುಡಿದ ಹಣದಿಂದ ರಾಮನಗರ ಜಿಲ್ಲೆಯಲ್ಲಿ ರಾಜಕೀಯವಾಗಿ ಗಟ್ಟಿ ನೆಲೆ ಕಂಡುಕೊಳ್ಳಲು ದೇವೇಗೌಡರು ಚುನಾವಣೆ ನಿಲ್ಲುವ ಮೊದಲೇ ತೆಗೆದುಕೊಂಡಂತಹ ಜಮೀನು ಅದು ಎಂದರು. ನ್ಯಾಯಾಲಯದಿಂದ ಒಂದಿಷ್ಟು ನಿರ್ದೇಶನ ಕೊಟ್ಟಿದ್ದು ಕೆಲವೊಂದು ಸರ್ವೆ ನಂಬರ್ ಕೊಟ್ಟು ವರದಿ ನೀಡುವಂತೆ ತಿಳಿಸಿದೆ. ಕಾನೂನಾತ್ಮಕವಾಗಿ ಯಾವ ರೀತಿ ಹೋರಾಟ ಮಾಡಬೇಕು ಮಾಡುತ್ತೇವೆ. ಈ ಭೂಮಿಯನ್ನು ನಾವು ಕೃಷಿ ಚಟುವಟಿಕೆಗೆ ತೆಗೆದುಕೊಂಡಿದ್ದು, ಅಲ್ಲಿ ಯಾವುದೇ ಕಮರ್ಷಿಯಲ್ ಕಟ್ಟಡ ಕಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಮೂಲ ಕೃಷಿಕರು, ರೈತರು ನೀವು ಬಂದು ನೋಡಬಹುದು. ನಮ್ಮ ತೋಟದಲ್ಲಿ ಎಷ್ಟು ಅಡಿಕೆ ಎಷ್ಟು ತೆಂಗಿನ ಮರಗಳಿವೆ ಎಂದು. ಇದು ಕೃಷಿ ಚಟುವಟಿಕೆಗೆ ಬಳಸುತ್ತಿರುವ ಭೂಮಿಯಾಗಿದೆ. ಈ ಜಮೀನಿನ ಸಂಬಂಧ ನಾಲೈದು ಮಂದಿ ಕಾಂಗ್ರೆಸ್ ನಾಯಕರು ಕುಮ್ಮಕ್ಕು ಕೊಟ್ಟು ಮಾಧ್ಯಮದ ಮುಂದೆ ನಿಲ್ಲಿಸಿ ಹೇಳಿಕೊಟ್ಟಿದ್ದಾರೆ. ಏನೇ ಇದ್ದರೂ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಈ ವಿಚಾರವಾಗಿ 15 -20 ವರ್ಷದಿಂದ ಆಪಾದನೆ ಎದುರಿಸುತ್ತಿದ್ದೇವೆ ಎಂದರು.
ಚುನಾವಣೆ ವೇಳೆ ಮಾತ್ರ ಗೃಹಲಕ್ಷ್ಮಿ ಗ್ಯಾರಂಟಿ: ಚುನಾವಣೆ ವೇಳೆಯಲ್ಲಿ ಮಾತ್ರ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಹಣ ಬಿಡುಗಡೆ ಮಾಡುತ್ತಾರೆ. ನಂತರ ಮರೆತುಬಿಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಭೆ ಮಾಡಿದ್ದೇವೆ. ಪಕ್ಷದ ಸದಸ್ಯತ್ವ ನೋಂದಣಿ ವೇಗವಾಗಿ ನಡೆಯುತ್ತಿದೆ. ಹಾಸನ, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯ ಪಕ್ಷದ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ. ಮುಂಬರುವ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಸಭೆಯಲ್ಲಿ ಆರೋಗ್ಯಕರವಾದ ಚರ್ಚೆಗಳು ನಡೆದಿದೆ. ಮುಂದಿನ 10 ದಿನದಲ್ಲಿ ಕುಮಾರಣ್ಣ ಜೆಡಿಎಸ್ ಶಾಸಕರು ಎಂಎಲ್ಸಿ ಮುಖಂಡರ ಸಭೆಯನ್ನು ಕರೆಯಲಿದ್ದಾರೆ ಎಂದರು. ಲೋಕಸಭಾ ಅಽವೇಶನ ನಡೆಯುವಾಗ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ದೇವೇಗೌಡರು ಸೂಚನೆ ಕೊಟ್ಟಿದ್ದರು. ಅದರಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದು ನಿಖಿಲ್ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಎ. ಮಂಜು, ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್ ಲಿಂಗೇಶ್, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಮುಖಂಡರಾದ ಎನ್.ಆರ್.ಸಂತೋಷ್, ಶಿವಮೊಗ್ಗದ ಶಾರದಾ ಅಪ್ಪಾಜಿ ಗೌಡ, ಪ್ರಸನ್ನ ಕುಮಾರ್, ಅಶೋಕ್, ಚಿಕ್ಕಮಗಳೂರಿನ ಸುಧಾಕರ್ ಶೆಟ್ಟಿ ಇತರರು ಹಾಜರಿದ್ದರು.