ವಾಷಿಂಗ್ಟನ್,ಆ.6- ಭಾರತ, ಅಮೆರಿಕ ನಡುವೆ ಸುಂಕ ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಇಂಥ ನಿರ್ಣಾಯಕ ಸಮಯದಲ್ಲಿ ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ ಎಂದು ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಅವರು ಡೊನಾಲ್ಡ್ ಟ್ರಂಪ್‌ಗೆ ಸಲಹೆ ನೀಡಿದ್ದಾರೆ.
ರಷ್ಯಾದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಮುಂದಿನ 24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ನಿಕ್ಕಿ ಹ್ಯಾಲಿ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರ ಪ್ರಸ್ತಾಪಗಳು ನಿರ್ಣಾಯಕ ಸಂದರ್ಭದಲ್ಲಿ ಭಾರತ-ಅಮೆರಿಕದ ಸಂಬಂಧಗಳನ್ನು ಹದಗೆಡಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್‌್ಸ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ನಿಕ್ಕಿ, ಟ್ರಂಪ್ ಆಡಳಿತವು ದ್ವಿಮುಖ ನೀತಿ ಅಳವಡಿಸಿಕೊಂಡಿದೆ. ಚೀನಾದಂತಹ ಶತ್ರುರಾಷ್ಟ್ರಕ್ಕೆ ವ್ಯಾಪಾರಕ್ಕಾಗಿ ಅಮೆರಿಕ 90 ದಿನಗಳ ಸುಂಕ ವಿನಾಯ್ತಿ ನೀಡಿದೆ. ಆದರೆ ಭಾರತದ ಮೇಲೆ ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ಟ್ರಂಪ್ ಹೇಳುತ್ತಾರೆ. ಆದರೆ ರಷ್ಯಾ ಮತ್ತು ಇರಾನ್‌ನ ಅತಿದೊಡ್ಡ ತೈಲ ಖರೀದಿದಾರ ಚೀನಾಗೆ 90 ದಿನಗಳ ಸುಂಕ ವಿನಾಯ್ತಿ ಕೊಡುತ್ತಾರೆ. ಇದು ಒಳ್ಳೆಯದಲ್ಲ. ಚೀನಾದಂಥ ಶತ್ರು ರಾಷ್ಟ್ರಕ್ಕೆ ರಿಯಾಯತಿ ನೀಡಬೇಡಿ. ಹಾಗೆಯೇ ಭಾರತದಂತಹ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧವನ್ನು ಹದಗೆಡಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಆಗಸ್ಟ್ 1ರಿಂದ ಜಾರಿಗೆ ಬಂದ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.25ರಷ್ಟು ಹೆಚ್ಚಿಸುವುದಾಗಿ ಟ್ರಂಪ್ ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹೊಸ ಒಪ್ಪಂದದಲ್ಲಿ ಭಾರತವು ಅಮೆರಿಕದ ಸರಕುಗಳ ಮೇಲೆ ಶೂನ್ಯ ಸುಂಕವನ್ನು ಪ್ರಸ್ತಾಪಿಸಿದ್ದು, ನಾವು ವಿರೋಧಿಸುವ ಯುದ್ಧಕ್ಕೆ ಅವರು ಹಣಕಾಸು ಒದಗಿಸುತ್ತಿದ್ದರೆ, ಶೂನ್ಯ ಸುಂಕಗಳು ವಿಧಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಭಾರತವು ತನ್ನ ಇಂಧನ ನೀತಿಯನ್ನು ಪದೇ ಪದೇ ಸಮರ್ಥಿಸಿಕೊಂಡಿದೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಕೈಗೆಟುಕುವ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ತೈಲವನ್ನು ಖರೀದಿಸುತ್ತದೆ ಎಂದು ಹೇಳುತ್ತದೆ. ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ಸಹ ರಷ್ಯಾದೊಂದಿಗೆ ವ್ಯಾಪಾರ ಮತ್ತು ಇಂಧನ ಸಂಬಂಧಗಳನ್ನು ಹೊಂದಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಸುಂಕಗಳನ್ನು ಜಾರಿಗೆ ತಂದರೆ, ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಜವಳಿ, ಆಟೋ ಭಾಗಗಳು, ರಾಸಾಯನಿಕಗಳು ಮತ್ತು ರತ್ನ-ಆಭರಣಗಳಂತಹ ವಲಯಗಳ ಸ್ಪರ್ಧಾತಕತೆ ದುರ್ಬಲಗೊಳ್ಳಬಹುದು ಎಂದು ಐಸಿಆರೆ ಹೇಳಿದೆ.ಹಣಕಾಸು ವರ್ಷದಲ್ಲಿ ಅಮೆರಿಕದೊಂದಿಗಿನ ಭಾರತದ ವ್ಯಾಪಾರ ಹೆಚ್ಚುವರಿ 41 ಬಿಲಿಯನ್ ಡಾಲರ್ ಆಗಿದ್ದು, ಅದರ ಮೇಲೆ ಈಗ ಪರಿಣಾಮ ಬೀರಬಹುದು. ಆದಾಗ್ಯೂ, ಫಾರ್ಮಾ, ಪೆಟ್ರೋಲಿಯಂ ಮತ್ತು ಟೆಲಿಕಾಂ ಉಪಕರಣಗಳಂತಹ ಕೆಲವು ವಲಯಗಳು ಪ್ರಸ್ತುತ ಸುಂಕಗಳ ಪ್ರಭಾವದಿಂದ ಕಡಿಮೆ ಪರಿಣಾಮ ಬೀರಬಹುದು.
ಅಮೆರಿಕ ಮತ್ತು ಚೀನಾ ಮೇ ತಿಂಗಳಲ್ಲಿ 90 ದಿನಗಳ ಸುಂಕ ವಿರಾಮಕ್ಕೆ ಒಪ್ಪಿಕೊಂಡವು, ಈ ಅವಧಿಯಲ್ಲಿ ಅಮೆರಿಕದ ಸುಂಕಗಳನ್ನು ಶೇ. 145ರಿಂದ ಶೇ. 30ಕ್ಕೆ ಮತ್ತು ಚೀನಾದ ಸುಂಕಗಳನ್ನು ಶೇ.125 ರಿಂದ ಶೇ.10ಕ್ಕೆ ಇಳಿಸಲಾಯಿತು. ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರರ ಹೇಳಿಕೆಯಲ್ಲಿ ಸರ್ಕಾರವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.
ಭಾರತ ಲಾಭ ಮಾಡಿಕೊಳ್ಳುತ್ತಿದೆ :
ಒಂದು ದಿನದ ಹಿಂದಷ್ಟೇ ಸುಂಕ ಗಣನೀಯ ಏರಿಕೆ ಕುರಿತು ಟ್ರಂಪ್ ಮಾತನಾಡಿದ್ದರು, ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲ ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾದ ಯುದ್ಧ ಟ್ಯಾಂಕರ್‌ಗಳಿಂದ ಉಕ್ರೇನ್‌ನಲ್ಲಿ ಹಲವು ಜನ ಸಾಯುತ್ತಿದ್ದರೂ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು.
ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ :
ಈಗಾಗಲೇ ಆಗಸ್ಟ್ 7ರಿಂದ ಅನ್ವಯವಾಗುವಂತೆ ಱಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇ.25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ. ಬೃಹತ್ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆದ್ರೆ, ಯಾವ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿಸಿರಲಿಲ್ಲ.
ಭಾರತವು ರಷ್ಯಾದಿಂದ ದೇಶದ ಅಗತ್ಯವಿರುವ ಕಚ್ಚಾತೈಲದ ಪೈಕಿ ಶೇ.35ರಿಂದ 40ರಷ್ಟು ಖರೀದಿಸುತ್ತಿದೆ. ಉಕ್ರೇನ್ ಜೊತೆಗಿನ ಯುದ್ಧ ಆರಂಭಕ್ಕೂ ಮುನ್ನ ಹೋಲಿಸಿದ್ರೆ, ಆಮದು ಪ್ರಮಾಣವು ಶೇ.0.2ರಷ್ಟು ಏರಿಕೆಯಾಗಿದೆ. ರಷ್ಯಾದಿಂದ ಗರಿಷ್ಠ ಪ್ರಮಾಣದ ಕಚ್ಚಾತೈಲ ಖರೀದಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.
ಭಾರತವು ಈಗ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಸಮುದ್ರ ಖರೀದಿದಾರನಾಗಿದ್ದು, 2025 ರ ಮೊದಲಾರ್ಧದಲ್ಲಿ ದಿನಕ್ಕೆ ಸುಮಾರು 1.75 ಮಿಲಿಯನ್ ಬ್ಯಾರೆಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 1 ರಷ್ಟು ಹೆಚ್ಚಾಗಿದೆ.
ಜಾಗತಿಕ ತೈಲ ಪೂರೈಕೆಯನ್ನು ಸ್ಥಿರಗೊಳಿಸುವಲ್ಲಿ ಭಾರತದ ಪಾತ್ರವನ್ನು ಅಮೆರಿಕ ಆರಂಭದಲ್ಲಿ ಸ್ವಾಗತಿಸಿತ್ತು, ಆದರೆ ಈಗ ಆ ಖರೀದಿಗಳು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಕ್ರೇನ್ ಯುದ್ಧಕ್ಕೆ ಹಣಕಾಸು ಸಹಾಯ ಮಾಡುತ್ತಿವೆ ಎಂದು ಟ್ರಂಪ್ ಹೇಳುತ್ತಿದ್ದಾರೆ.