ಬೆಂಗಳೂರು,ಏ.26- ಪ್ಲೀಸ್ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜಯನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಜನರು ಸ್ಥಿರತೆಯನ್ನು ಬಯಸುತ್ತಿದ್ದಾರೆ.
ಭಾರತ ಅಭಿವೃದ್ಧಿ ಕಾಣಲು ಬಯಸುತ್ತಿದ್ದಾರೆ. 10 ವರ್ಷದ ಕೇಂದ್ರ ಸರ್ಕಾರದ ಸಾಧನೆ ಜನರ ಮನಸ್ಸಿನಲ್ಲಿದೆ. ಮತದಾನದಲ್ಲಿ ಜನರ ಉತ್ಸಾಹ ನೋಡಬಹುದು ಎಂದರು. ಮುಖವಾಗಿ ಹಿರಿಯ ನಾಗರಿಕರು ಕ್ಯೂನಲ್ಲಿ ನಿಂತು ಮತದಾನ ಮಾಡುತ್ತಾರೆ. ಮತಗಟ್ಟೆಯಲ್ಲಿ ಉದ್ದನೆಯ ಸರತಿ ಸಾಲು ಕಾಣುತ್ತಿದೆ. ಚುನಾವಣೆ ಆಯೋಗ ಮನೆಯಲ್ಲೇ ಮತದಾನಕ್ಕೆ ಅವಕಾಶ ಮಾಡಿದರೂ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ ಎಂದು ಅಭಿಪ್ರಾಯಟ್ಟರು.
ಮೊದಲ ಬಾರಿ ವೋಟ್ ಮಾಡುವ ಮತದಾರರು ಮತಗಟ್ಟೆಗೆ ಬರುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ವೋಟ್ ಮಾಡುವ ಭರವಸೆ ನನಗೆ ಇದೆ ಎಂದರು. ಸರಳವಾಗಿ ಮತಗಟ್ಟೆಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.