ಬೆಂಗಳೂರು,ಏ.13- ಕಡುಬಡತನಕ್ಕೆ ಸಿಲುಕಿ ಡೋಲಾಯಮಾನ ಸ್ಥಿತಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬರಿಗೆ ಬಿಜಿಎಸ್ ಸಂಸ್ಥೆಯಲ್ಲಿ ಪ್ರವೇಶಾತಿ ಕಲ್ಪಿಸುವ ಮೂಲಕ ಆದಿಚುಂಚನಗಿರಿ ಪೀಠದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಮಾನವೀಯತೆ ಮೆರೆದಿದ್ದಾರೆ. ನಗರದ ಅಶೋಕ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮೇಘಶ್ರೀ.ಎಂ ವಿದ್ಯಾರ್ಥಿನಿಗೆ ಪ್ರವೇಶ ಶುಲ್ಕ ಕಟ್ಟಲು ಹಣವಿಲ್ಲದ ಕಾರಣ ಆಡಳಿತ ಮಂಡಳಿ ಪ್ರವೇಶಾತಿಯನ್ನು ನಿರಾಕರಿಸಿತ್ತು.
ಈ ವಿಷಯವು ಒಕ್ಕಲಿಗ ಯುವ ಬ್ರಿಗೇಡ್‍ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಅವರ ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿಸಿ ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು. ಕಡುಬಡವರಾಗಿರುವ ಮೇಘಶ್ರೀಯವರ ತಾಯಿ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ಪುತ್ರಿಯನ್ನು ದ್ವಿತೀಯ ಪಿಯುಸಿಗೆ ಪ್ರವೇಶ ಶುಲ್ಕ ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು.
ತಂದೆ ಇಲ್ಲದೆ ಬಡತನದಲ್ಲೇ ಬೆಳೆದಿರುವ ಈ ವಿದ್ಯಾರ್ಥಿನಿಯು ಪ್ರಥಮ ಪಿಯುಸಿಯಲ್ಲಿ 600 ಅಂಕಗಳಿಗೆ 598 ಅಂಕಗಳನ್ನು ಗಳಿಸಿದ್ದಾಳೆ. ಕನ್ನಡ 99, ಇಂಗ್ಲೀಷ್ 100, ಭೌತಶಾಸ್ತ್ರ 100ಕ್ಕೆ ನೂರು, ರಸಾಯನಶಾಸ್ತ್ರ 100ಕ್ಕೆ 100, ಗಣಿತ 99, ಜೀವಶಾಸ್ತ್ರ 100ಕ್ಕೆ ನೂರು ಅಂಕ ಪಡೆದಿದ್ದಾಳೆ.
ಇತ್ತೀಚೆಗೆ ವಿದ್ಯಾರ್ಥಿನಿಯು ಆದಿಚುಂಚನಗಿರಿ ಪೀಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿ ದ್ವೀತಿಯ ಪಿಯುಸಿ ವ್ಯಾಸಂಕ್ಕಾಗಿ ಸಹಾಯ ಮಾಡುವಂತೆ ಕೋರಿಕೊಂಡಿದ್ದರು. ವಿದ್ಯಾರ್ಥಿನಿಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಶ್ರೀಗಳು ತಮ್ಮ ಬಿಜಿಎಸ್ ಸಂಸ್ಥೆಯಲ್ಲಿ ಮುಂದಿನ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.