ಆಧ್ಯಾತವು ಮಾನವ ಜೀವನದ ಅನರ್ಘ ರತ್ನ ಸಂಪತ್ತು. ಈ ಸಂಪತ್ತು ಆಧ್ಯಾತ ಜೀವಿಗಳ ಸಾಧನೆ ಸಿದ್ಧಿ, ಜನತೆಯ ಜೀವನವನ್ನು ಬೆಳಗುವ ದಾರಿದೀಪವಾಗಿದೆ. ಇದು ಅನುಭವಿಗಳ ಅಮೃತ ಅನುಭವವೂ ಹೌದು, ಈ ಅನುಭವದ ಫಲವಾಗಿ ಭರತ ಖಂಡದಲ್ಲಿ ವಿಶ್ವ ಕಲ್ಯಾಣಕ್ಕಾಗಿ ಅನೇಕ ಮಠಮಾನ್ಯಗಳು ಸ್ಥಾಪಿತಗೊಂಡಿವೆ.
ಮರಗಳು ಮನುಷ್ಯನ ಬದುಕಿನಲ್ಲಿ ಆಧ್ಯಾತಿಕ ನೆಲೆಯ ಕೇಂದ್ರ ಸ್ನಾನವೂ ಹೌದು. ಭಾರತದ ಭವ್ಯ ಪರಂಪರೆಯಲ್ಲಿ ಆಧ್ಯಾತಿಕ ಕೇಂದ್ರವಾಗಿರುವ ಮಠಮಾನ್ಯಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಳಕಳಿಯಿಂದ ಸಮಾಜ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿಕೊಂಡು ಬರುತ್ತಿವೆ.
ಅಂತಹ ಅನೇಕ ಮಠಗಳಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠವೂ ಒಂದು. ಈ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಗಳು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀಗಳ ವಯಸ್ಸಿನ ಕಾರಣದಿಂದ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ನಿಷ್ಠಾವಂತ ಅಧಿಕಾರಿಯೊಬ್ಬರು ಶ್ರೀಮಠದ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನಿಜಕ್ಕೂ ಕ್ರಾಂತಿಕಾರಿ ಬೆಳವಣಿಗೆ.
ಶ್ರೀಮಠದ ಜಗದ್ಗುರು ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಪಡೆದು ಅವರ ಉತ್ತರಾಧಿಕಾರಿಯಾಗಿ, ನಾಡಿನ ಜಗದ್ಗುರುಗಳು, ಮಹಾಸ್ವಾಮಿಗಳು, ಸಾಧುಸಂತರ ಸಾನಿಧ್ಯದಲ್ಲಿ ಹಾಗೂ ಗಣ್ಯರ ಸಮಕ್ಷಮದಲ್ಲಿ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಎಂಬ ನೂತನ ನಾಮಕರಣಗೊಂಡು ಪೀಠಾರೋಹಣ ಮಾಡಿದ್ದಾರೆ.
ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಡಾ.ಹೆಚ್.ಎಲ್‌ನಾಗರಾಜ್ ಆಧ್ಯಾತಿಕತೆಯ ಬಗ್ಗೆ, ಆಸಕ್ತಿ ಹೊಂದುವ ಮೂಲಕ ದೇವರ ಅನುಗ್ರಹದಿಂದ ಶ್ರೀ ಮಠದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಇದು ಸಮಸ್ತ ಶ್ರೀ ಮಠದ ಭಕ್ತ ಗಣಕ್ಕೆ ಸಂತಸ ಉಂಟುಮಾಡಿದೆ.
ಡಾ.ಹೆಚ್.ಎಲ್.ನಾಗರಾಜ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ, ಹೊನ್ನೇನಹಳ್ಳಿ ಗ್ರಾಮದ ದೊಡ್ಡ ಮನೆ ಕೆಂಪಲಿಂಗೇಗೌಡರ ವಂಶದ ಶ್ರೀ ಸಿದ್ದಯ್ಯನವರ ಮಗನಾದ ಶ್ರೀ ಹೆಚ್.ಎಸ್.ಲಿಂಗಯ್ಯ ಮತ್ತು ಶ್ರೀಮತಿ ಗಂಗಮನವರ ದ್ವಿತೀಯ ಪುತ್ರರಾಗಿ 1975ರಲ್ಲಿ ಜನಿಸಿದರು. ಇವರಿಗೆ ಇಬ್ಬರು ಅಕ್ಕಂದಿರು ಮತ್ತು ಒಬ್ಬ ಅಣ್ಣ ಇದ್ದಾರೆ. ಇವರದು ತುಂಬು ಕುಟುಂಬ.
ಕಲ್ಯಾಣ ಕಾರ್ಯಗಳನ್ನು ನಿರ್ವಹಿಸಿ, ಆ ಮೂಲಕ ಸಮಾಜಕ್ಕೆ ಮಾದರಿ ಅಧಿಕಾರಿ ಎನಿಸಿಕೊಂಡಿದ್ದ ಇವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಭ್ರಷ್ಟಾಚಾರ ರಹಿತ ವೃತ್ತಿ ಬದುಕು, ಸಾರ್ವಜನಿಕ ಆಡಳಿತ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗೆ ಅನೇಕ ಗೌರವ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಹಾಸನ, ಚಿಕ್ಕಮಂಗಳೂರು ಜಿಲ್ಲೆಗಳ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಶೂನ್ಯ ಬಾಕಿಗಾಗಿ ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಅಭಿನಂದನಾ ಪತ್ರ, ಹಾಗೆಯೇ ಅನೇಕ ಸಂಘ ಸಂಸ್ಥೆಗಳಿಂದ ಉತ್ತಮ ಅಧಿಕಾರಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಸೇವಾ ರತ್ನ ಪ್ರಶಸ್ತಿ, ಹೆಚ್.ಡಿ.ಚೌಡಯ್ಯ ಸಮಾಜ ಸೇವಾ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ತಮ ಜೀವನದುದ್ದಕ್ಕೂ ಒಳ್ಳೆಯ ಸಂಸ್ಕಾರ, ಆಚಾರ ವಿಚಾರಗಳಿಂದ ಬೆಳೆದು. ವೃತ್ತಿ ಬದುಕಿನಲ್ಲಿಯೂ ಅದನ್ನೇ ಮುಂದುವರಿಸಿಕೊಂಡು ಸಮಾಜದ ಒಳಿತಿಗಾಗಿ ಬದುಕಿದ ಶ್ರೀಯುತರು ಶ್ರೀಮಠದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.
2006ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗುವ ಮೂಲಕ ತಹಸೀಲ್ದಾರ್ ಹುದ್ದೆಯನ್ನು ಪಡೆದು ಸರ್ಕಾರಿ ಸೇವೆಗೆ ಸೇರಿ ಹಾಸನ ಜಿಲ್ಲೆಯ ಹೊಳೆನರಸೀಪುರ, ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್.ಪೇಟೆ, ಮದ್ದೂರು ಮತ್ತು ಚನ್ನರಾಯಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸಿ ಕಂದಾಯ ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿ ಎಂಬ ಹೆಸರು ಗಳಿಸಿದ್ದಾರೆ. 2014ರಲ್ಲಿ ಉಪವಿಭಾಗಾಧಿಕಾರಿಯಾಗಿ ವೃತ್ತಿಯಲ್ಲಿ ಬಡ್ತಿ ಪಡೆದು ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಹಾಗೂ ಪಾಂಡುವುರ ಉಪವಿಭಾಗ, ಹಾಸನ, ರಾಮನಗರ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮತ್ತು ಮಂಡ್ಯ ಮೈ ಶುಗರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿರುವ ಶ್ರೀಯುತರು ತಮ ವೃತ್ತಿ ಬದುಕಿನಲ್ಲಿ ಎಲ್ಲಿಯೂ ಕಳಂಕ ಬರದಂತೆ ದಕ್ಷತೆ, ಪ್ರಾಮಾಣಿಕತೆ, ನಿಷ್ಠೆಯಿಂದ ಸರ್ಕಾರಿ ಸೇವೆ ಸಲ್ಲಿಸಿ, ಪಾರದರ್ಶಕ ಆಡಳಿತವನ್ನು ನಡೆಸುವ ಮೂಲಕ ಪ್ರತಿಯೊಬ್ಬರ ಪ್ರೀತಿ ಗಳಿಸಿ, ಪ್ರಾಮಾಣಿಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಂದಾಯ ಇಲಾಖೆಯಲ್ಲಿ ಇವರು ಸಲ್ಲಿಸಿರುವ ಸೇವೆ ನಿಜಕ್ಕೂ ಶ್ಲಾಘನೀಯ ಕಂದಾಯ ಅದಾಲತ್ ಮತ್ತು ತೆರೆದ ನ್ಯಾಯಾಲಯಗಳ ಮೂಲಕ 30,000ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ ರಾಜ್ಯದ ಮೊದಲ ಅಧಿಕಾರಿಯೆಂಬ ಹೆಗ್ಗಳಿಕೆ ಇವರದು. ಸರ್ಕಾರಿ ಕೆರೆ ಒತ್ತುವರಿ ತೆರವು, ಅಕ್ರಮ ಮರಳು ಸಾಗಾಣಿಕೆ ತಡೆ, ಖನಿಜ ಸಂಪನೂಲಗಳ ಸಂರಕ್ಷಣೆ ಹಾಗೂ ಅನೇಕ ಕರೆ ಮತ್ತು ಕಲ್ಯಾಣಿಗಳ ಪುನರುಜೀವನಗೊಳಿಸುವ ಮೂಲಕ ಜಲ ಸಾಕ್ಷರತೆಯಲ್ಲಿ ಹೆಸರು ಮಾಡಿದ್ದಾರೆ.
ಉತ್ತರಾಖಂಡ ರಾಜ್ಯದ ಮೇಘ ಪ್ರವಾಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿರುವ ಇವರು ತಮ ಆಡಳಿತ ಸೇವೆಯಂತೆ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅರ್ಥಶಾಸ್ತ್ರ) ಮೂಲಾಂಶಗಳು, ಸ್ಪರ್ಧಾತಕ ಪರೀಕ್ಷೆಗಳಿಗಾಗಿ ಭಾರತ ಇತಿಹಾಸ, ಸಾಮಾನ್ಯ ಜ್ಞಾನ, ರೈತರಿಗಾಗಿ ಕಂದಾಯ ಕಳಕಳಿ, ಯುವಕರಿಗಾಗಿ ಬುದ್ದಿ ಮಾತು ಎಂಬ ಪುಸ್ತಕ. ಹೀಗೆ ಹತ್ತು ಹಲವಾರು ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕೃತಿಗೆ ಸಾಕ್ಷಿಯಾಗಿದ್ದಾರೆ.
-ಡಾ. ಶೈಲಜ ಸಿ.ವಿ. ಸಹ ಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು.