ನವದೆಹಲಿ,ಆ.5- ಚೀನಾವು ಭಾರತದ 2 ಸಾವಿರ ಚದರ ಕಿ.ಮೀ. ಭೂ ಪ್ರದೇಶವನ್ನು ಆಕ್ರಮಣ ಮಾಡಿದೆ ಎಂಬ ರಾಹುಲ್‌ಗಾಂಧಿ ಆರೋಪಕ್ಕೆ ಛೀಮಾರಿ ಹಾಕಿದ್ದ ಸುಪ್ರೀಂಕೋರ್ಟ್ ಆರೋಪಕ್ಕೆ ಇಂಡಿಯಾ ಬ್ಲಾಕ್ ಮೈತ್ರಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಪ್ರಜೆಯೊಬ್ಬನನ್ನು ನೀನು ನಿಜವಾದ ಭಾರತೀಯನೇ ಎಂದು ನಿರ್ಧರಿಸಲು ನ್ಯಾಯಾಧೀಶರಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕ ವಾಧ್ರಾ ಹೇಳಿದ್ದರು. ಇದರ ಬೆನ್ನಲ್ಲೇ ಇಂಡಿಯಾ ಮೈತ್ರಿ ನಾಯಕರು ಸುಪ್ರೀಂಕೋರ್ಟ್ ಆದೇಶಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ರಾಜಕೀಯ ಪಕ್ಷಗಳ ಪ್ರಜಾಸತ್ತಾತಕ ಹಕ್ಕುಗಳ ಮೇಲೆ ಅನಗತ್ಯವಾದ ಅಸಾಧಾರಣ ಅವಲೋಕನವನ್ನು ಹಾಲಿ ನ್ಯಾಯಾಧೀಶರು ಮಾಡಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಾಲತಾಣದ ಮುಖ್ಯಸ್ಥ ಜಯರಾಂ ರಮೇಶ್ ಕೂಡ ಪೋಸ್ಟ್ ಮಾಡಿದ್ದು, ಪ್ರತಿಯೊಬ್ಬ ದೇಶಭಕ್ತ ಭಾರತೀಯರು ಉತ್ತರಗಳನ್ನು ಹುಡುಕಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಡಿಡಿಎಲ್‌ಜೆ ನೀತಿಯನ್ನು ಅನುಸರಿಸುತ್ತದೆ. ನಿರಾಕರಿಸು, ಗಮನವನ್ನು ಬೇರೆಡೆ ಸೆಳೆ, ಸುಳ್ಳು ಹೇಳು ಮತ್ತು ಸಮರ್ಥಿಸು ಎಂಬುದು ಇದರ ಅರ್ಥ. ಕೇಂದ್ರ ಸರ್ಕಾರದ ನೀತಿಯೂ ಇದೇ ಆಗಿದೆ ಎಂದು ಕಿಡಿಕಾರಿದ್ದಾರೆ.
ಇಂಡಿಯಾ ಬ್ಲಾಕ್‌ನ ಅನೇಕ ನಾಯಕರು ಸುಪ್ರೀಂಕೋರ್ಟ್ ನ್ಯಾಯಾಧೀಶರ ಅವಲೋಕನಕ್ಕೆ ಅಸಮತಿ ವ್ಯಕ್ತಪಡಿಸಿದ್ದಾರೆ. ಇದು ಅನಗತ್ಯ ಮತ್ತು ಅಸಾಧಾರಣ ಹೇಳಿಕೆಯಾಗಿದೆ. ರಾಹುಲ್‌ಗಾಂಧಿಯವರು ವಾಸ್ತವವನ್ನು ದೇಶದ ಜನತೆ ಮುಂದೆ ಇಟ್ಟಿದ್ದಾರೆ ಹೊರತು ದೇಶಕ್ಕಾಗಲೀ, ಸೈನಿಕರಿಗಾಗಲೀ ಅಪಮಾನ ಮಾಡುವ ಪ್ರಮೇಯವೇ ಇಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.