Monday, November 25, 2024
Homeರಾಷ್ಟ್ರೀಯ | Nationalಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ : ಅಮಿತ್ ಷಾ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ : ಅಮಿತ್ ಷಾ

ನವದೆಹಲಿ,ಫೆ.18- ದೇಶದ ಜನ ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೆ ಪ್ರಧಾನಿಯನ್ನಾಗಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಮರಳಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ಹೇಳಿದ್ದಾರೆ.ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಸಮಾವೇಶ-2024 ರಲ್ಲಿ ಮಾತನಾಡಿದ ಅವರು, 75 ವರ್ಷಗಳ ಸ್ವಾತಂತ್ರ್ಯದ ಅವಧಿಯಲ್ಲಿ ದೇಶ 17 ಲೋಕಸಭೆ ಚುನಾವಣೆಗಳನ್ನು ಕಂಡಿದೆ. 22 ಸರ್ಕಾರಗಳು, 15 ಪ್ರಧಾನಮಂತ್ರಿಗಳು ದೇಶವನ್ನಾಳಿದ್ದಾರೆ.

ಪ್ರತಿಯೊಂದು ಸರ್ಕಾರವು ದೇಶದ ಅಭಿವೃದ್ಧಿಗೆ ತನ್ನದೇ ಆದ ಪ್ರಯತ್ನ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಒಟ್ಟಾರೆ ಅಭಿವೃದ್ಧಿ ಕಂಡಿದೆ ಎಂದು ಯಾವುದೇ ಗೊಂದಲಗಳಿಲ್ಲದೆ ಹೇಳಬಲ್ಲೆ ಎಂದರು.ಪ್ರತಿಯೊಂದು ಕ್ಷೇತ್ರ, ಪ್ರತಿ ವ್ಯಕ್ತಿಯ ಅಭಿವೃದ್ಧಿ ಕಳೆದ 10 ವರ್ಷಗಳಲ್ಲಿ ಸಹಕಾರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ. 60 ಕೋಟಿ ಬಡವರು ಬಡತನದಿಂದ ಮುಕ್ತಿ ಪಡೆದಿದ್ದಾರೆ ಎಂದು ತಿಳಿಸಿದರು.

2014 ರವರೆಗೂ ಬಡತನ ನಿರ್ಮೂಲನೆ ಬಗ್ಗೆ ಮಾತುಗಳನ್ನಾಡುತ್ತಿದ್ದರು. ಪ್ರತಿಯೊಬ್ಬ ಭಾರತೀಯನಿಗೂ ಪ್ರಜಾಪ್ರಭುತ್ವದಲ್ಲಿ ತನ್ನ ಪಾತ್ರ ಏನು ಮತ್ತು ನನಗೆ ಸಿಕ್ಕಿದ್ದೇನು ಎಂಬ ಗೊಂದಲಗಳಿದ್ದವು. ಆದರೆ ಮೋದಿ ಸರ್ಕಾರ 60 ಕೋಟಿ ಜನರಿಗೆ ಮನೆ ಕಟ್ಟಿಸಿಕೊಟ್ಟಿದೆ. ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದೆ. ಶೌಚಾಲಯ ನಿರ್ಮಿಸಿದೆ. ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದೆ. ವಿದ್ಯುತ್ ಪೂರೈಸಿದೆ. 80 ಕೋಟಿಗೂ ಹೆಚ್ಚು ಬಡವರಿಗೆ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡಿದೆ. 5 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆಯ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿದೆ ಎಂದು ವಿವರಿಸಿದರು.

ಅಭಿವೃದ್ಧಿಯನ್ನು ಒಪ್ಪಿಕೊಂಡಿರುವ ಜನ ಮುಂದಿನ 5 ವರ್ಷಗಳಲ್ಲಿ ಬಿಜೆಪಿ ಕೈಗೆ ಅಧಿಕಾರ ನೀಡುವುದು ಹಾಗೂ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವ ನಿರ್ಧಾರ ಮಾಡಿದ್ದಾರೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ರಾಷ್ಟ್ರೀಯ ಹಬ್ಬವಾಗಿ ಸಂಭ್ರಮಿಸಲ್ಪಟ್ಟಿದೆ. ಇದು ಹೊಸ ಯುಗದ ಉದಯಕ್ಕೆ ಕಾರಣವಾಗಿದೆ. 2019 ರ ನವೆಂಬರ್ 9 ರಂದು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಬಿಜೆಪಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಕಟ್ಟುವ ನಿರ್ಧಾರ ಕೈಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ರಾಮನಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ರಚಿಸಿದರು.

ನಿರ್ಮಾಣ ಕಾರ್ಯ ಅತ್ಯಂತ ವೇಗವಾಗಿ ನಡೆದು 4 ವರ್ಷಗಳಲ್ಲೇ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಿತು ಎಂದು ಹೇಳಿದರು. ಶ್ರೀರಾಮಮಂದಿರದ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು.ದೇಶಾದ್ಯಂತ ಜೈ ಶ್ರೀರಾಮ್ ಮಧುರವಾಣಿಯನ್ನು ನಾವು ಕೇಳುವಂತಾಗಿದೆ. ಇದು ಭಾರತೀಯರ ಹೆಮ್ಮೆಯ ಸಂಗತಿ ಎಂದು ಜೆ.ಪಿ.ನಡ್ಡಾ ಪ್ರಶಂಸೆ ವ್ಯಕ್ತಪಡಿಸಿದರು.

ಆಚಾರ್ಯ ಶ್ರೀ 108 ವಿದ್ಯಸಾಗರ್‍ಜಿ ಮಹಾರಾಜ್ ನಿಧನಕ್ಕೆ ಸಮಾವೇಶದಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪ್ರಧಾನಿಯಾಗಿ 10 ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದ ನರೇಂದ್ರ ಮೋದಿಯವರನ್ನು ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಸನ್ಮಾನಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರು, ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ವಿರೋಧ ಪಕ್ಷದ ನಾಯಕರು, ಕೇಂದ್ರ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು. ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ರೀಟಾ ಬಹುಗುಣ ಜೋಷಿ, ರಾಹುಲ್‍ಗಾಂಧಿ ಯಾತ್ರೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರನ್ನು ಗಂಭೀರ ರಾಜಕಾರಣಿ ಎಂದು ಪರಿಗಣಿಸುವುದಿಲ್ಲ. ಇಡೀ ದೇಶವೇ ಮೋದಿಮಯವಾಗಿದೆ. ಬಿಜೆಪಿ 400 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಉತ್ತರಪ್ರದೇಶದಲ್ಲಿ 80 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದರು.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‍ನ ಕಮಲ್‍ನಾಥ್‍ರವರು ಕಾಂಗ್ರೆಸ್‍ನಲ್ಲಿ ನೋವುಂಡಿದ್ದಾರೆ. ಅದನ್ನು ನಾವು ಅವರ ಮಾತುಗಳಲ್ಲಿ ಕೇಳಿದ್ದೇವೆ. ಮಧ್ಯಪ್ರದೇಶ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿಗೆ ಯಾರೇ ಬಂದರೂ ಮುಕ್ತ ಸ್ವಾಗತವಿದೆ ಎಂದು ರೀಟಾ ಬಹುಗುಣ ಜೋಷಿ ಹೇಳಿದರು.

RELATED ARTICLES

Latest News