Friday, April 18, 2025
Homeಇದೀಗ ಬಂದ ಸುದ್ದಿಕಾಮಗಾರಿ ಬಿಲ್‌ ಪಾವತಿಯಲ್ಲಿ ಕುಟುಂಬದ ಹಸ್ತಕ್ಷೇಪ ಇಲ್ಲ : ಸತೀಶ್‌ ಜಾರಕಿಹೊಳಿ

ಕಾಮಗಾರಿ ಬಿಲ್‌ ಪಾವತಿಯಲ್ಲಿ ಕುಟುಂಬದ ಹಸ್ತಕ್ಷೇಪ ಇಲ್ಲ : ಸತೀಶ್‌ ಜಾರಕಿಹೊಳಿ

ಬೆಂಗಳೂರು,ಏ.10– ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿಗಳ ಬಿಲ್‌ ಪಾವತಿಯಲ್ಲಿ ಕುಟುಂಬದ ಸದಸ್ಯರ ಹಸ್ತಕ್ಷೇಪ ಇಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಬಾಕಿ ಬಿಲ್‌ಗಳ ಪಾವತಿಗೆ ಶಿಫಾರಸುಗಳು ಬರುತ್ತವೆ. ಅದನ್ನು ಇಲಾಖೆ ಪರಿಗಣಿಸುತ್ತದೆ. ವಿಶೇಷವಾಗಿ ಶೇ.25 ರಷ್ಟು ಬಿಲ್‌ ಪಾವತಿಗೆ ಮೊದಲಿನಿಂದಲೂ ಅವಕಾಶವಿದೆ. ಉಳಿದಂತೆ ಜ್ಯೇಷ್ಠತೆ ಆಧಾರದ ಮೇಲೆ ಹಣ ಬಿಡುಗಡೆಯಾಗುತ್ತದೆ ಎಂದರು.

ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರರ ಸಂಘವು ಈ ಮೊದಲು ನೀಡಿದ್ದ ಸಲಹೆಗಳನ್ನು ಆಧರಿಸಿ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಯಾವುದೇ ಸಲಹೆಗಳನ್ನು ನೀಡಿದರೆ ಅದನ್ನು ಪರಿಗಣಿಸುತ್ತೇವೆ. ರಾಜಕಾರಣ ಎಂದ ಮೇಲೆ ಶಾಸಕರು, ಪಕ್ಷದ ಕಾರ್ಯಕರ್ತರು ಶಿಫಾರಸು ನೀಡುವುದು ಸಹಜ. ಅದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

ಗುತ್ತಿಗೆದಾರರ ಸಂಘದವರು ಸಭೆ ಮಾಡಿಯೇ ಸಲಹೆ ನೀಡಬೇಕೆಂದೇನಿಲ್ಲ. ಔಪಚಾರಿಕವಾಗಿ ಸಲಹೆ ನೀಡಿದರೂ ಅದನ್ನು ಪರಿಗಣಿಸುತ್ತೇವೆ. ನಮ ಇಲಾಖೆಯಿಂದ ಯಾರೂ ಕಮಿಷನ್‌ ಕೇಳುತ್ತಿಲ್ಲ. ಯಾವುದಾದರೂ ಅಂತಹ ನಿರ್ದಿಷ್ಟ ಪ್ರಕರಣಗಳಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಶಿರಾ ಬಳಿ ನಿರ್ಮಾಣವಾಗಬೇಕು ಎಂದು ನಾನು ಆರು ತಿಂಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಇದರಿಂದ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಅಲ್ಲಿ ಸರ್ಕಾರದ ಭೂಮಿ ಕೂಡ ಲಭ್ಯವಿದೆ ಎಂದು ತಿಳಿಸಿದರು.

ಏಳೆಂಟು ಜಿಲ್ಲೆಗಳ ಜನ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಶಿರಾದಲ್ಲಾದರೆ ಆಕಡೆಗೆ ಸಂಚಾರದಟ್ಟಣೆ ನಿಯಂತ್ರಣಗೊಳ್ಳುತ್ತದೆ. ಬೆಂಗಳೂರಿಗೆ ಬರುವುದು ತಪ್ಪುತ್ತದೆ. ಬೆಂಗಳೂರು ಬಳಿಯೇ ಮತ್ತೊಂದು ವಿಮಾನನಿಲ್ದಾಣವಾದರೆ ಮತ್ತೆ 5 ಸಾವಿರ ವಾಹನಗಳು ಬರುತ್ತವೆ. ಮತ್ತಷ್ಟು ಸಂಚಾರದಟ್ಟಣೆ ಹೆಚ್ಚಾಗುತ್ತದೆ ಎಂದರು.

ನಾವು ಏನೇ ಶಿಫಾರಸು ಮಾಡಿದರೂ ಅಂತಿಮವಾಗಿ ತೀರ್ಮಾನ ಮಾಡುವುದು ವಿಮಾನನಿಲ್ದಾಣ ಪ್ರಾಧಿಕಾರದವರು. ತಾಂತ್ರಿಕ ಅಂಶಗಳನ್ನು ಪರಿಗಣಿಸಿ ತಜ್ಞರ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ನಮ ಅನುಕೂಲಕ್ಕೆ ತಕ್ಕಂತೆ ಏನೇ ಹೇಳಿದರೂ ಅದು ಕಾರ್ಯಸಾಧುವಲ್ಲ ಎಂದರು.

ಶಿರಾದಲ್ಲಿ ವಿಮಾನನಿಲ್ದಾಣ ನಿರ್ಮಿಸಲು ದೊಡ್ಡ ಸಂಸ್ಥೆಯವರು ಮುಂದೆ ಬರುವುದಿಲ್ಲ. ಜಿಲ್ಲೆಯ ವಿಮಾನನಿಲ್ದಾಣವಾಗುತ್ತದೆ ಎಂದು ಟೀಕಿಸುವುದು ಅಪ್ರಸ್ತುತ. ಬೆಂಗಳೂರಿನ ಪರಿಸ್ಥಿತಿಯನ್ನೂ ಗಮನಿಸಬೇಕು. ಕೇವಲ ಬೆಂಗಳೂರಿನವರು ಮಾತ್ರ ವಿದೇಶಗಳಿಗೆ ಹೋಗುವುದಿಲ್ಲ. ಬೇರೆ ಬೇರೆ ಜಿಲ್ಲೆಗಳಿಂದಲೂ ಬರುತ್ತಾರೆ. ಬೆಂಗಳೂರಿಗೆ ಮತ್ತೆ 5 ಸಾವಿರ ವಾಹನಗಳು ಹೆಚ್ಚಾಗಿ ಬಂದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನೂ ಗಮನಿಸಬೇಕಿದೆ ಎಂದರು.

RELATED ARTICLES

Latest News