ಧರ್ಮಸ್ಥಳ,ಏ.20- ಜಾತಿಗಣತಿ ವಿಚಾರದಲ್ಲಿ ಏಕಾಏಕಿ ಆತುರದ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿ ಸಮುದಾಯಗಳಿಗೂ ನ್ಯಾಯ ಒದಗಿಸುತ್ತೇವೆ. ಈಗಷ್ಟೇ ವರದಿಯನ್ನು ತೆಗೆದು ನೋಡುತ್ತಿದ್ದೇವೆ. ಇನ್ನೂ ಬೇಕಾದಷ್ಟು ಸಮಯವಿದೆ. ತಾಳೆಯಿಂದ ಇರಬೇಕು ಎಂದರು.
ಜಾತಿಗಣತಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಶೇ.90ರಷ್ಟು ಜನರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಶೇ.10ರಷ್ಟು ಜನರ ಮಾಹಿತಿ ಕಲೆ ಹಾಕಿಲ್ಲ. ಕೆಲವರು ಸಲಹೆಗಳನ್ನು ಕೊಡುತ್ತಿದ್ದಾರೆ. ಮನೆಯಲ್ಲಿ ಇಲ್ಲದವರು ಮಾಹಿತಿಯನ್ನು ಕೊಟ್ಟಿಲ್ಲ. ಸಚಿವ ಸಂಪುಟದಲ್ಲಿ ಚರ್ಚೆಯಾಗಿ ಸಚಿವರುಗಳು ಕೂಡ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಲ್ಲಾ ಜಾತಿ, ಸಮುದಾಯಗಳಲ್ಲೂ ಬಡವರಿದ್ದಾರೆ. ಅವರಿಗೆ ಅನುಕೂಲವಾಗಬೇಕು. ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಶಕ್ತಿ ಕೊಡಬೇಕು. ಒಟ್ಟಾರೆ ಎಲ್ಲರಿಗೂ ನ್ಯಾಯ ಕೊಡಬೇಕಿದೆ ಎಂದು ಹೇಳಿದರು.
ಎಲ್ಲರನ್ನೂ ಸರಿಸಮಾನವಾಗಿ ತೆಗೆದುಕೊಂಡು ಹೋಗುವ ಮೂಲಧರ್ಮ, ಸಿದ್ಧಾಂತ ಕಾಂಗ್ರೆಸ್‌ನಲ್ಲಿದೆ. ಜಾತಿಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಬರೆದಿರುವ ಪತ್ರವನ್ನು ನಾನು ನೋಡಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾರು ಹೇಳಿದ್ದು :
ಕರಾವಳಿ ಹಿಂದುತ್ವದ ಭದ್ರ ಕೋಟೆ ಎಂದು ಯಾರು ಹೇಳಿದ್ದಾರೆ?, ಎಲ್ಲಾ ಧರ್ಮಕ್ಕೂ ಇದೊಂದು ಭದ್ರಕೋಟೆ. ಈ ಭಾಗದಲ್ಲಿ ನೀರು, ದೇವಾಲಯ, ದರ್ಗಾ, ಸಮುದ್ರ, ವಾತಾವರಣ, ಪರಿಸರ, ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳು, ಬ್ಯಾಂಕ್‌ಗಳು ಎಲ್ಲವೂ ಇವೆ. ಇವುಗಳಲ್ಲಿ ಯಾವುದೇ ಜಾತಿ ಇದೆಯೇ? ಎಂದು ಪ್ರಶ್ನಿಸಿದರು.
ಕೆಲವರು ಮಾತ್ರ ಬರೀ ಹಿಂದೂ ಎಂದು ಹೇಳುತ್ತಾರೆ. ಎಲ್ಲಾ ಜನಾಂಗವೂ ಒಂದೇ ಎಂಬುದು ನಮ ನಿಲುವು. ಎಲ್ಲಾ ವರ್ಗದವರನ್ನೂ ರಕ್ಷಣೆ ಮಾಡುತ್ತೇವೆ. ರಾಜ್ಯವೆಂದರೆ ಕರಾವಳಿ, ಮಲೆನಾಡು, ಹಳೆ ಮೈಸೂರು, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಎಲ್ಲವನ್ನೂ ಸೇರಿಸಿಕೊಂಡಿದೆ ಎಂದು ವ್ಯಾಖ್ಯಾನಿಸಿದರು.
ಕರಾವಳಿಯಲ್ಲಿ ಭಾವನೆಗಿಂತ ಜನರ ಬದುಕು ಮುಖ್ಯ. ಭಾವನೆಗಿಂತ ಬದುಕಿನ ಮೇಲೆ ರಾಜಕಾರಣ ಮಾಡಬೇಕು. ಈ ಭಾಗದಲ್ಲಿ ಇಬ್ಬರು ಶಾಸಕರು ಗೆದ್ದಿದ್ದಾರೆ. ಈ ಭಾಗದಲ್ಲಿ ಪಕ್ಷದ ಬಲವರ್ಧನೆಯಾಗಬೇಕು, ಜನರಿಗೆ ಒಳ್ಳೆಯದಾಗಬೇಕು. ಬಲಿಷ್ಠವಾದ ಸರ್ಕಾರವಿದೆ. ಮುಂದೆಯೂ ನಮದೇ ಸರ್ಕಾರ ಬರಲಿದೆ ಎಂದು ಅವರು ಹೇಳಿದರು.
ಜನರು ಬಿಜೆಪಿಯನ್ನು ಮತ ಹಾಕಿ ಹೆಚ್ಚು ಗೆಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಪ್ರತಿಕುಟುಂಬಕ್ಕೂ ಸಹಾಯವಾಗುತ್ತಿದೆ. ಬಿಜೆಪಿಯಿಂದ ಏನಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.