ಬೆಂಗಳೂರು, ಅ.5- ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ, ಎಲ್ಲರೂ ಅಗತ್ಯ ಮಾಹಿತಿ ನೀಡುವುದು ಸೂಕ್ತ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಯಾರು ಬೇಕಾದರೂ ಆಕ್ಷೇಪ ವ್ಯಕ್ತಪಡಿಸಬಹುದು, ಅಪೇಕ್ಷೆಯನ್ನೂ ಪಡಬಹುದು. ಆದರೆ ಸಮೀಕ್ಷೆಯಂತೂ ನಡೆಯುತ್ತದೆ ಎಂದರು.
ಈ ಹಿಂದೆ ನಡೆದಿದ್ದಂತಹ ಸಮೀಕ್ಷೆ ಸರಿಯಿಲ್ಲ ಎಂದು ಹೇಳಿದ್ದಕ್ಕಾಗಿಯೇ ನಮ ಸರ್ಕಾರ ಹೊಸದಾಗಿ ಸಮೀಕ್ಷೆ ನಡೆಸುತ್ತಿದೆ. ಈಗಲೂ ವಿರೋಧ ಮಾಡುವುದು ಅರ್ಥಹೀನ ಎಂದು ತಿರುಗೇಟು ನೀಡಿದರು.
ಸಮೀಕ್ಷೆಯಲ್ಲಿ ಕೆಲವು ಖಾಸಗಿ ಮಾಹಿತಿಯ ಪ್ರಶ್ನೆಗಳಿವೆ. ಅವುಗಳಿಗೆ ಉತ್ತರ ನೀಡಬೇಕಿಲ್ಲ. ನ್ಯಾಯಾಲಯ ಕೂಡ ಈ ವಿಚಾರವನ್ನು ಸ್ಪಷ್ಟ ಪಡಿಸಿದೆ. ಕುರಿ, ಕೋಳಿ ಬಗ್ಗೆ, ವಾಚು, ಉಂಗುರ, ಫ್ರಿಡ್‌್ಜ, ಚಿನ್ನ ಎಷ್ಟಿವೆ ಎಂಬ ಬಗ್ಗೆ ಮಾಹಿತಿ ಕೇಳಬೇಡಿ, ಅವೆಲ್ಲಾ ಖಾಸಗಿ ವಿಚಾರ ಎಂದು ಅಧಿಕಾರಿಗಳಿಗೆ ನಾನು ಕೂಡ ಸೂಚನೆ ನೀಡಿದ್ದೇನೆ. ಅವರು ಯಾವ ರೀತಿ ಪರಿಗಣಿಸುತ್ತಾರೋ ಗೊತ್ತಿಲ್ಲ ಎಂದರು.
ಹೊಸದಾಗಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಬೇಕು. ನಿಗದಿತ ಅವಧಿಯಲ್ಲಿ ಸಮೀಕ್ಷೆ ಮುಗಿಯದಿದ್ದರೆ ಸಮಯ ವಿಸ್ತರಣೆಯ ಬಗ್ಗೆ ನಾನು ಉತ್ತರ ನೀಡಲು ಸಾಧ್ಯವಾಗುವುದಿಲ್ಲ. ಆಯೋಗ ಮತ್ತು ಇಲಾಖೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಶಿವಮೊಗ್ಗದಲ್ಲಿ ನಾಲ್ಕು ಗ್ರಾಮಗಳು ಸಮೀಕ್ಷೆಯನ್ನು ಬಹಿಷ್ಕರಿಸಿರುವುದಕ್ಕೆ ಹಾಗೂ ಸಿದ್ದರಾಮಯ್ಯ ಮುಂದಿನ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಚಿವ ಜಮೀರ್ ಅಹಮದ್ ಖಾನ್ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು. ಖಾಸಗಿ ಕೆಲಸಕ್ಕಾಗಿ ತಾವು ಹೊರ ರಾಜ್ಯಕ್ಕೆ ಪ್ರವಾಸ ತೆರಳುತ್ತಿದ್ದು, ನಾಳೆ ವಾಪಾಸ್ ಬರುತ್ತೇನೆ ಎಂದು ಹೇಳಿ ನಿರ್ಗಮಿಸಿದರು.