ಬೆಂಗಳೂರು,ಮೇ.4- ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಅಗತ್ಯವಿಲ್ಲ, ನಮ್ಮ ಪೊಲೀಸರು ಸಮರ್ಥವಾಗಿ ಕೆಲಸ ಮಾಡುತ್ತಿದ್ದು, 8 ಮಂದಿಯನ್ನು ಬಂಧಿಸಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆರೋಪಿಗಳ ಬಂಧನವಾಗಿರುವಾಗ ಎನ್ಐಎ ತನಿಖೆ ಅಗತ್ಯವಿಲ್ಲ, ಬಿಜೆಪಿಯವರು ಎನ್‌ಐಎ ತನಿಖೆಗೆ ಒತ್ತಾಯಿಸುವುದು ಅವರ ಅಭಿಪ್ರಾಯ ಎಂದರು.
ನಮ್ಮ ಪ್ರಕಾರ, ತನಿಖೆ ಮುಂದುವರೆದರೆ ಆರೋಪಿಗಳ ಬಂಧನವಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ವಿಚಾರಣೆಯಾಗುತ್ತದೆ ಎಂದು ಹೇಳಿದರು. ಸುಹಾಸ್ ಶೆಟ್ಟಿ ಅವರ ಮನೆಗೆ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡದೇ ಇರುವ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಇದೊಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿಯ ಮೇಲೆ ಕೊಲೆಗಳು ಸೇರಿದಂತೆ 5 ಕ್ರಿಮಿನಲ್ ಪ್ರಕರಣಗಳಿದ್ದವು. ಈ ಕಾರಣಕ್ಕೆ ಜವಾಬ್ದಾರಿ ಸ್ಥಾನದಲ್ಲಿರುವ ನಾನೂ ಸೇರಿದಂತೆ ಯಾವುದೇ ಪ್ರತಿನಿಧಿಗಳು ಭೇಟಿ ನೀಡಲಿಲ್ಲ ಎಂದು ಹೇಳಿದ ಅವರು, ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಕೊಲೆ ಪ್ರಕರಣದಲ್ಲಿ ಯಾರನ್ನೋ ಆರೋಪಿಗಳು ಎಂದು ಬಂಧಿಸಲು ಸಾಧ್ಯವಿಲ್ಲ. ಸುಹಾಸ್‌ಶೆಟ್ಟಿ ಕೊಲೆಯಲ್ಲಿ ಹಿಂದೂ ಸಮುದಾಯದ ಆರೋಪಿಗಳನ್ನು ಬಂಧಿಸುವ ಮೂಲಕ ದಾರಿ ತಪ್ಪಿಸಲಾಗುತ್ತಿದೆ ಎಂಬುದು ಅನಗತ್ಯ ಆರೋಪ ಎಂದು ಹೇಳಿದರು.
ನಿನ್ನೆ ತಾವು ಮಂಗಳೂರಿಗೆ ಭೇಟಿ ನೀಡಿ ಮುಸ್ಲಿಂ ಸಮುದಾಯದ ಜೊತೆ ಮಾತ್ರ ಸಭೆ ನಡೆಸಲಾಗಿದೆ ಎಂದು ಆರೋಪವು ಅನಗತ್ಯ. ನನ್ನನ್ನು ಭೇಟಿ ಮಾಡಲು ಯಾರಾದರೂ ಬಂದರೆ ಅದನ್ನು ಬೇಡ ಎನ್ನಲು ಸಾಧ್ಯವೇ?, ಮುಸ್ಲಿಂ ಸಮುದಾಯದ ಮುಖಂಡರು ಬಂದಿದ್ದರು. ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಇನ್ನು ನಮ್ಮ ಪಕ್ಷದವರೇ ಆದ ರಮಾನಾಥರೈ, ಮಂಜುನಾಥ್ ಭಂಡಾರಿ ಸೇರಿದಂತೆ ಹಿಂದೂ ಸಮುದಾಯದ ಅನೇಕ ಮುಖಂಡರು ಬಂದು ಭೇಟಿ ಮಾಡಿದ್ದಾರೆ. ಬೇರೆ ಸಂಘಟನೆಗಳು, ಪಕ್ಷದ ಮುಖಂಡರು ಅಥವಾ ಸಮುದಾಯದವರು ಬಂದು ನನ್ನನ್ನು ಭೇಟಿ ಮಾಡಿದ್ದರೆ, ಮನವಿ ಕೊಟ್ಟಿದ್ದರೆ ಬೇಡ ಎನ್ನುತ್ತಿದ್ದರೇ? ಎಂದರು.
ಹಿಂದೂಗಳನ್ನು ದೂರ ಇಟ್ಟು ಸಭೆ ನಡೆಸಲಾಗಿದೆ ಎಂಬುದು ರಾಜಕೀಯ ಪ್ರೇರಿತ. ಅವರಾಗಿಯೇ ಬಂದರೆ ಯಾವುದೇ ಸಮುದಾಯದವರನ್ನು ಬೇಡ ಎನ್ನಲಾಗುವುದಿಲ್ಲ. ಸರ್ಕಾರಿ ಪ್ರವಾಸಿ ಮಂದಿರಕ್ಕೆ ಬಂದರೆ ಯಾರಿಗಾದರೂ ಅಡ್ಡಿಯಿದೆಯೇ?, ಕೊಲೆಯಾದ ಸುಹಾಸ್ ಶೆಟ್ಟಿ ಮನೆಗೆ ಯಾವುದೇ ಕಾಂಗ್ರೆಸ್ ಮುಖಂಡರು ಭೇಟಿ ನೀಡಬಾರದು ಎಂಬ ಸೂಚನೆಗಳನ್ನು ಯಾರೂ ನೀಡಿಲ್ಲ. ಅನಗತ್ಯವಾಗಿ ಇಂತಹ ಸುಳ್ಳು ವದಂತಿಗಳನ್ನು ಹರಡಲಾಗುತ್ತಿದೆ ಎಂದು ಆರೋಪಿಸಿದರು.
ಸುಹಾಸ್‌ಶೆಟ್ಟಿ ಕೊಲೆಗೆ 2022 ರಲ್ಲಿ ಹತ್ಯೆ ಯಾದ ಫಾಜಿಲ್ ಅವರ ಸಹೋದರ ಆದಿಲ್ ಮೆಹರೊನ್ 5 ಲಕ್ಷ ರೂ. ಸುಪಾರಿ ನೀಡಿರುವ ಬಗ್ಗೆಯೂ ತನಿಖೆಯಾಗುತ್ತಿದೆ. ಕೊಲೆಗೆ ಮೂಲ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
ಕಾನೂನು ಸುವ್ಯವಸ್ಥೆ ಪಾಲನೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕೊಲೆಗಳಾಗುವ ಸುಳಿವುಗಳು ಸಿಕ್ಕರೆ ಅದನ್ನು ತಡೆಯುವಲ್ಲಿ ಹಲವು ಪ್ರಯತ್ನಗಳಾಗಿವೆ. ಕೊಲೆಗಳು ನಡೆದ ಬಳಿಕ ತಕ್ಷಣವೇ ಆರೋಪಿಗಳನ್ನು ಬಂಧಿಸಿ ಕುಟುಂಬದ ಸಂತ್ರಸ್ತರಿಗೆ ನ್ಯಾಯ ದೊರಕಿಸಿದ್ದೇವೆ ಎಂದರು.
ಅಪರಾಧಗಳ ನಿಯಂತ್ರಣಕ್ಕೆ ಅದರಲ್ಲೂ ಕೋಮು ಪ್ರಚೋದಿತ ದುಷ್ಕೃತ್ವದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಮತ್ತು ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 2 ವರ್ಷದಲ್ಲಿ ಮಾಡಿರುವ ಕೊಲೆ ಪ್ರಕರಣದಲ್ಲಿ ಶೇ.99 ರಷ್ಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿರುವ ಪಿಜಿಗಳ ಮಾಹಿತಿ ಕಲೆ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕೃತ, ಅನಧಿಕೃತ ಪಿಜಿಗಳ ಬಗ್ಗೆ ಸಮಗ್ರ ವಿವರಣೆಗಳು ಪೊಲೀಸ್ ಠಾಣೆಯಲ್ಲಿರಬೇಕು. ಅನಧಿಕೃತವಾಗಿದ್ದರೆ ಅವುಗಳು ನಡೆಯಲು ಹೇಗೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆ ಕೂಡ ಇದೆ. ಬಿಬಿಎಂಪಿಯಿಂದ ಸ್ಪಷ್ಟ ಅನುಮತಿ ಪಡೆದ ಬಳಿಕವಷ್ಟೇ ಪಿಜಿಗಳು ನಡೆಯಬೇಕು ಎಂದು ಎಚ್.ಎಸ್‌ಆರ್ ಲೇ ಔಟ್ ಪಿಜಿಯಲ್ಲಿನ ಯುವತಿಯ ನಗ್ನ ಓಡಾಟಕ್ಕೆ ಪ್ರತಿಕ್ರಿಯಿಸಿದರು.
ಒಳಮೀಸಲಾತಿ ಕುರಿತು ನಾಳೆಯಿಂದ ಸಮೀಕ್ಷೆ ಆರಂಭಗೊಳ್ಳಲಿದೆ. ನಾಗಮೋಹನದಾಸ್ ಅವರ ಆಯೋಗ ಕೆಲ ಪ್ರಶ್ನಾವಳಿಗಳನ್ನು ಸಿದ್ದಪಡಿಸಿಕೊಂಡಿದೆ. ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸಮೀಕ್ಷಾ ಬಳಿಕ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಅದನ್ನು ಆಧರಿಸಿ ಮುಂದಿನ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.
ಮೂಲಜಾತಿ ನಮೂದೆಯಲ್ಲಿ ಗೊಂದಲಗಳಿರುವ ಬಗ್ಗೆ ನಮಗೆ ಸಮಗ್ರ ಮಾಹಿತಿ ಇಲ್ಲ. ಈವರೆಗಿನ ಮಾಹಿತಿ ಪ್ರಕಾರ ಎಲ್ಲವೂ ಸರಿಯಿದೆ ಎಂದರು. ಪಾಕಿಸ್ತಾನದ ಸಂಘರ್ಷದ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆಗೆ ಉತ್ತರಿಸಲು ಪರಮೇಶ್ವರ್ ನಿರಾಕರಿಸಿದರು.