ನವದೆಹಲಿ, ಮೇ 27 : ಇತ್ತೀಚೆಗೆ ಸಿಂಗಾಪುರ ಹಾಗೂ ಭಾರತದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ಹೊಸ ತಳಿಯ ಲಕ್ಷಣಗಳು ವೈರಲ್ ಜ್ವರದ ಮಾದರಿಯಲ್ಲಿವೆ ಎಂದು ದೆಹಲಿ ಆರೋಗ್ಯ ಸಚಿವ ಪಂಕಜ್ ಸಿಂಗ್ ಹೇಳಿದ್ದಾರೆ.
ನಗರದಲ್ಲಿ ಕಂಡುಬಂದಿರುವ ಪ್ರಕರಣಗಳನ್ನು ಗಮನಿಸಿದರೆ ಲಕ್ಷಣಗಳು ಸೌಮ್ಯವಾಗಿವೆ ಎಂದು ಹೇಳಿದ್ದಾರೆ. ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ, ಕೊರೊನಾ ಸೋಂಕಿತರಲ್ಲಿ ನೆಗಡಿ, ಜ್ವರ, ಕೆಮ್ಮು, ಕಫದಂತಹ ಲಕ್ಷಣಗಳು ಕಂಡುಬಂದಿವೆ. ದೆಹಲಿಯಲ್ಲಿ ಇದುವರೆಗೆ 104 ಪ್ರಕರಣಗಳು ಕಂಡುಬಂದಿವೆ, ದೇಶದಲ್ಲಿ 1000ಪ್ರಕರಣಗಳು ವರದಿಯಾಗಿವೆ.
ಕೊರೊನಾ ವೈರಸ್ನ ಹೊಸ ತಳಿ .1 ಆತಂಕ ಹುಟ್ಟಿಸುತ್ತಿದೆ. ಸಿಂಗಾಪುರ, ಹಾಂಕಾಂಗ್ನಲ್ಲಿ ತಲ್ಲಣ ಎಬ್ಬಿಸಿರುವ ಕೊರೊನಾ ಹೊಸ ತಳಿ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಭಯ ಇಲ್ಲದಿದ್ದರೂ ಜನರು ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು ಎಂದು ಸೂಚನೆ ನೀಡಿದ್ದಾರೆ.ಆದರೆ ಆಸ್ಪತ್ರೆಯಲ್ಲಿ ಔಷಧಗಳು, ಬೆಡ್ಗಳು, ಆಕ್ಸಿಜನ್ ಹಾಗೂ ಇನ್ನಿತರೆ ವೈದ್ಯಕೀಯ ಉಪಕರಣಗಳನ್ನು ಸಿದ್ಧವಿಟ್ಟುಕೊಳ್ಳುವಂತೆ ಸೂಚಿಸಿದ್ದೇವೆ. ಎಂಥಾ ತುರ್ತು ಪರಿಸ್ಥಿತಿ ಉದ್ಭವವಾದರೂ ಗಾಬರಿಗೊಳ್ಳದಂತೆ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಒಂದು ವಾರದಲ್ಲಿ (ಮೇ 19 ರ ನಂತರ), ಕೇರಳದಲ್ಲಿ ಅತಿ ಹೆಚ್ಚು 335 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 153, ದೆಹಲಿಯಲ್ಲಿ 99, ಗುಜರಾತ್ನಲ್ಲಿ 76 ಮತ್ತು ಕರ್ನಾಟಕದಲ್ಲಿ 80 ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಮೇ 26 ರಂದು ಬೆಳಗ್ಗೆ 8:00 ಗಂಟೆಗೆ ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 1009 ಆಗಿದೆ.
ಕೇರಳದಲ್ಲಿ ಅತಿ ಹೆಚ್ಚು 403 ಕೊರೊನಾ ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ 209 ಮತ್ತು ದೆಹಲಿಯಲ್ಲಿ 104 ಪ್ರಕರಣಗಳು ದಾಖಲಾಗಿವೆ. ಈ ನಗರಗಳ ನಂತರ ಗುಜರಾತ್ ಇದ್ದು, ಅಲ್ಲಿ 83 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 80, ಉತ್ತರ ಪ್ರದೇಶದಲ್ಲಿ 15 ಮತ್ತು ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳು ವರದಿಯಾಗಿವೆ.