ಮೈಸೂರು, ಅ.8- ಮುಂದಿನ ಐದು ವರ್ಷ ತಾವು ಸಚಿವರಾಗಿರಲಿದ್ದು, ಒಳ್ಳೆಯ ಕೆಲಸ ಮಾಡುವತ್ತ ಗಮನ ನೀಡುತ್ತೇವೆ. ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ . ಹಾಗಾಗಿ ಹುದ್ದೆಗಾಗಿ ರೇಸ್ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ದಸರಾ ಮಹೋತ್ಸವ ವೀಕ್ಷಣೆಗೆ ಮೈಸೂರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸದ್ಯಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರೆಯುತ್ತಾರೆ. ಹುದ್ದೆ ಖಾಲಿಯಿಲ್ಲ ಎಂದು ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ವಿರೋಧ ಪಕ್ಷಗಳು ಅಭಿಮಾನ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು. ನಾವೆಲ್ಲ ಅವರ ಬೆಂಬಲಕ್ಕೆ ಇದ್ದೇವೆ. ಐದು ವರ್ಷ ಕಾಲವು ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿ ಮುಂದುವರೆಯುತ್ತಾರೋ ಅಥವಾ ಮೂರು ವರ್ಷ ಮಾತ್ರ ಇರುತ್ತಾರೋ ಎಂಬುದನ್ನು ಹೈಕಮಾಂಡ್ ಹೇಳಬೇಕು. ಅದರ ಬಗ್ಗೆ ಹೇಳಿಕೆ ನೀಡುವ ಸಾಮಥ್ರ್ಯ ತಮಗಿಲ್ಲ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೂ ತಮಗೇನೂ ಆಭ್ಯಂತರವಿಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್ ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಮುಂದಿನ ಯಾವುದೇ ನಿರ್ಧಾರಗಳಾದರೂ ಪಕ್ಷದ ವರಿಷ್ಠರೇ ತೆಗೆದುಕೊಳ್ಳಬೇಕು ಎಂದರು.
ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆಯೇ ಅನಗತ್ಯ. ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬಲಪಡಿಸುವ ಬಗ್ಗೆ ಎಲ್ಲರೂ ಒತ್ತು ನೀಡುತ್ತಿದ್ದೇವೆ. ಉಳಿದ ವಿಚಾರಗಳ ಬಗ್ಗೆ ನಮಗೆ ಹೆಚ್ಚಿನ ಗಮನವಿಲ್ಲ, ಮುಖ್ಯಮಂತ್ರಿ ಬದಲಾವಣೆ ಇಲ್ಲ, ತಾವು ಮುಖ್ಯಮಂತ್ರಿಯ ಹುದ್ದೆಯ ರೇಸ್‍ನಲ್ಲಿ ಇಲ್ಲ ಎಂದು ನೂರಕ್ಕೂ ಹೆಚ್ಚು ಬಾರಿ ಹೇಳಿದ್ದೇನೆ. ಪ್ರತಿ 10 ನಿಮಿಷಕ್ಕೊಮ್ಮೆ ಈ ಪ್ರಶ್ನೆ ಎದುರಾಗುತ್ತಿದೆ. ನನಗೂ ಹೇಳಿ ಹೇಳಿ ಸಾಕಾಗಿದೆ. ಜನರಿಗೂ ನೋಡಿ ಬೇಜಾರಾಗಿದೆ ಎಂದರು.
ಕಳೆದ ಐದು ವರ್ಷಗಳಿಂದಲೂ ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ ಮುಖ್ಯಮಂತ್ರಿಯಾಗಬೇಕೆಂದು ಬೆಂಬಲಿಗರು ಘೋಷಣೆ ಕೂಗುತ್ತಲೇ ಇದ್ದಾರೆ. ಇದರಲ್ಲಿ ಏನೂ ವಿಶೇಷ ಇಲ್ಲ ಎಂದರು.
ಜಮ್ಮು-ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಮುಂದೆ ಮಹಾರಾಷ್ಟ್ರದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.