ಹುಬ್ಬಳ್ಳಿ, ಸೆ.17- ತಂತ್ರಜ್ಞಾನ ಆಧರಿಸಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ನಡೆಸಿ, ಅನರ್ಹರನ್ನು ಕೈಬಿಡಲು ಯಾವುದೇ ವಿರೋಧ ಇಲ್ಲ. ಆದರೆ ಅರ್ಹರು ಸೌಲಭ್ಯ ವಂಚಿತರಾಗಬಾರದು ಎಂಬ ಎಚ್ಚರಿಕೆ ವಹಿಸಬೇಕೆಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಅನೇಕ ಕಡೆ ಅನರ್ಹರು ಬಿಪಿಎಲ್ ಪಟ್ಟಿಯಲ್ಲಿರುವುದು ಸತ್ಯ. ಅವರನ್ನು ಸರಿಯಾಗಿ ಪರಿಶೀಲನೆ ಮಾಡಿ ತೆಗೆದು ಹಾಕುವುದಕ್ಕೆ ನಮ ವಿರೋಧ ಇಲ್ಲ. ತಂತ್ರಜ್ಞಾನವನ್ನು ಬಳಕೆ ಮಾಡಿ ಪರಿಷ್ಕರಣೆ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಈ ಮೊದಲು ಕಾರ್ಡ್‌ಗಳ ಪರಿಷ್ಕರಣೆ ಜವಾಬ್ದಾರಿಯನ್ನು ಆಹಾರ ನಿರೀಕ್ಷಕರು (ಫುಡ್ ಇನ್‌್ಸಪೆಕ್ಟರ್)ಗಳಿಗೆ ವಹಿಸಿತ್ತು. ಅವರು ಜನರಿಗೆ ತೊಂದರೆ ನೀಡಿದ್ದರು.
ಕೆಲವು ಫುಡ್ ಇನ್‌್ಸಪೆಕ್ಟರ್‌ಗಳು ಒಂದೇ ಕಡೆ 20 ರಿಂದ 30 ವರ್ಷ ಉಳಿದುಕೊಂಡಿದ್ದರು ಎಂದು ಹೇಳಿದರು.ದೇಶದ 15ಕ್ಕೂ ಹೆಚ್ಚು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಇತ್ತೀಚೆಗೂ ತಮನ್ನು ಭೇಟಿ ಮಾಡಿದ್ದರು. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕಾರ್ಡ್‌ಗಳ ಪರಿಷ್ಕರಣೆ ಮಾಡಿ, ಕೆಳ ಹಂತದ ಅಧಿಕಾರಿಗಳಿಗೆ ವಿವೇಚನಾಧಿಕಾರ ಬಳಸಲು ಅವಕಾಶ ನೀಡಬೇಡಿ ಎಂದು ಸಲಹೆ ನೀಡಿದ್ದೇನೆ ಎಂದರು.
ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಯನ್ನು ನಾನು ಸಾರಸಗಟಾಗಿ ವಿರೋಧಿಸುವುದಿಲ್ಲ. ಅರ್ಹ ಫಲಾನುಭವಿಗಳನ್ನು ಕೈಬಿಡಲಾಗಿದೆ ಎಂಬ ಕರ್ನಾಟಕ ಬಿಜೆಪಿಯ ಆರೋಪವನ್ನು ಕೂಡ ಪರಿಗಣಿಸಬೇಕಿದೆ ಎಂದರು.
ಕೇಂದ್ರ ಸರ್ಕಾರ ಯಾವುದೇ ಮಾನ ದಂಡಗಳನ್ನು ನಿಗದಿ ಮಾಡುವುದಿಲ್ಲ. ಅರ್ಹತೆ ಆಧಾರದ ಮೇಲೆ 2011ರ ಜನಗಣತಿ ಹಾಗೂ ಆಹಾರ ಭದ್ರತೆ ಕಾಯ್ದೆ ಅನುಸಾರ ನಗರ ಪ್ರದೇಶಗಳಲ್ಲಿ ಶೇ.50 ರಷ್ಟು ಹಾಗೂ ಗ್ರಾಮೀಣ ಭಾಗದಲ್ಲಿ ಶೇ.75 ರಷ್ಟು ಜನಸಂಖ್ಯೆ, ಸರ್ಕಾರದ ರಿಯಾಯಿತಿ ಹಾಗೂ ಉಚಿತ ಪಡಿತರ ಪಡೆಯಲು ಅರ್ಹವಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಬಡವರಿಗೆ ಉಚಿತ ಪಡಿತರ ಪೂರೈಸುವುದನ್ನು ಆದ್ಯತೆಯನ್ನಾಗಿ ಪರಿಗಣಿಸಿದ್ದಾರೆ ಎಂದರು.
ಯಾರಿಗೆ ಉಚಿತ ಆಹಾರ ಧಾನ್ಯ ನೀಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಬೇಕಿದೆೆ. 7 ಎಕರೆಗಿಂತಲೂ ಹೆಚ್ಚಿನ ಭೂಮಿ ಹೊಂದಿರುವವರಿಗೆ ಬಿಪಿಎಲ್ ಸೌಲಭ್ಯ ನೀಡಬೇಕೇ? ಬೇಡವೇ? 8 ಎಕರೆ 9 ಎಕರೆ ಇರುವವರಿಗೂ ಉಚಿತ ಪಡಿತರ ನೀಡಬಹುದೇ? ವಾಹನಗಳನ್ನು ಹೊಂದಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ.
ಬೆನ್‌್ಜ ಕಾರು ಇರುವವರಿಗೂ ಬಿಪಿಎಲ್ ನೀಡುತ್ತೇವೆ ಎಂದರೆ ನಮ ವಿರೋಧ ಇಲ್ಲ. ಈ ಎಲ್ಲಾ ಅಂಶಗಳನ್ನು ತಮನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳಿಗೆ ವಿವರಿಸಿದ್ದೇನೆ ಎಂದು ತಿಳಿಸಿದರು.
ಈ ವಿಷಯದಲ್ಲಿ ರಾಜಕೀಯ ಮಾಡಲು ನಾನು ಬಯಸುವುದಿಲ್ಲ. ಕೆಲವು ಮುಖ್ಯಮಂತ್ರಿಗಳು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜನರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಆಹಾರ ಇಲಾಖೆ ಕಾರ್ಯದರ್ಶಿಗಳು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಹಾರ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಐಟಿ ರಿರ್ಟನ್ ಫೈಲ್ ಮಾಡಿದವರನ್ನು ಬಿಪಿಎಲ್‌ನಿಂದ ಕೈಬಿಡಬೇಕೆಂದು ಕೇಂದ್ರ ಸರ್ಕಾರ ಹೇಳಿಲ್ಲ. ಆದಾಯ ತೆರಿಗೆ ಪಾವತಿದಾರರನ್ನು ಬಿಪಿಎಲ್‌ನಿಂದ ಕೈಬಿಡಬೇಕು ಎಂಬ ಮಾನದಂಡವನ್ನು ರಾಜ್ಯಸರ್ಕಾರ ರೂಪಿಸಿಕೊಂಡಿದೆ.
ವರ್ಷಕ್ಕೆ 12 ಲಕ್ಷ ಆದಾಯ ಹೊಂದಿರುವವರು ಈ ವರ್ಷದಿಂದ ಆದಾಯ ತೆರಿಗೆ ಪಾವತಿಸುತ್ತಾರೆ. ಈ ಹಿಂದೆ 6 ಲಕ್ಷ ಆದಾಯ ಮಿತಿ ಇತ್ತು. ಆದಾಯ ತೆರಿಗೆ ಪಾವತಿಯ ಮಿತಿಯನ್ನು ನಿರ್ಧರಿಸುವುದು ಮತ್ತು ಪರಿಶೀಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದರು.
ಪ್ರತಿ 5 ವರ್ಷಕ್ಕೊಮೆ ಪರಿಶೀಲನೆ ನಡೆಸುವುದು ಕಾನೂನಿನಲ್ಲಿ ಕಡ್ಡಾಯವಾಗಿದೆ. ಮೃತರ ಹೆಸರಿನಲ್ಲೂ ಕಾರ್ಡ್‌ಗಳು ಮುಂದುವರೆದಿದ್ದು, ಸೌಲಭ್ಯಗಳು ದುರುಪಯೋಗವಾಗುತ್ತಿವೆ ಎಂದು ಹೇಳಿದರು.
ವಿಶ್ವ ಬ್ಯಾಂಕ್ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ವರದಿಗಳ ಪ್ರಕಾರ 25 ಕೋಟಿ ಜನ ಕಡುಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂಬ ಮಾತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಶೀಲನೆ ಮಾಡಬೇಕಿದೆ. ಇದಕ್ಕೆ ತಮ ವಿರೋಧ ಇಲ್ಲ ಎಂದು ಜೋಶಿ ಹೇಳಿದರು.