ಬೆಂಗಳೂರು,ಜ.22- ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ. ಇದೆಲ್ಲಾ ಬಾಲಿಶತನ, ನಾನ್‌ಸೆನ್‌್ಸ(ಮೂರ್ಖತನ) ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲಲು ಡಿ.ಕೆ.ಶಿವಕುಮಾರ್ ಅವರ ಕೊಡುಗೆ ಬಹಳಷ್ಟಿದೆ. ಅವರದು ಸಾಕಷ್ಟು ಖರ್ಚಾಗಿದೆ. ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತುಕತೆಯಾಗಿತ್ತು. ಹೀಗಾಗಿ ಮುಂದೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರಲ್ಲ. ಅವರಿಗೆ ಏನು ಆಗಬೇಕೊ ಅದು ಆಗಿ ಆಗಿದೆ. ಕಾಂಗ್ರೆಸ್ ಪಕ್ಷದ ಘನತೆ ಹಾಗೂ ಖ್ಯಾತಿಯನ್ನು ಕಟ್ಟಿಕೊಂಡು ಅವರಿಗೇನು ಆಗಬೇಕು. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯನವರಿರುವುದು ಖಚಿತ. ಮಂತ್ರಿಗಳ ನೆಪಮಾತ್ರ ಎಂದು ಹೇಳಿದರು.
ಈ ಮೂಲಕ ಎಚ್.ವಿಶ್ವನಾಥ್ ಅವರು ಡಿ.ಕೆ.ಶಿವಕುಮಾರ್ ಅವರ ಪರವಾಗಿ ಬಹಿರಂಗ ಹೇಳಿಕೆ ನೀಡಿ ಕುತೂಹಲ ಕೆರಳಿಸಿದ್ದಾರೆ.
ಮುಂದುವರೆದು ಅವರು ಸಿದ್ದರಾಮಯ್ಯನವರು ಮುಡಾ ಪ್ರಕರಣದಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ. ಮೈಸೂರು ಜನರಿಗೆ ಮನೆ ಕಟ್ಟಿಕೊಳ್ಳಲು ಒಂದು ಸೈಟ್ ಕೊಡುವುದಿಲ್ಲ. ಬದಲಾಗಿ ಮುಖ್ಯಮಂತ್ರಿ ಹಾಗೂ ಸಚಿವರು ತಮಷ್ಟಕ್ಕೆ ತಾವೇ ನಿವೇಶನಗಳನ್ನು ಬರೆಸಿಕೊಳ್ಳುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರ ಕಾಲದಲ್ಲಿ ಮೈಸೂರು ವಿಜಯನಗರ ಸಾಮ್ರಾಜ್ಯವಾಗಿದೆ. 1200 ರೂ.ಗೆ 50×80 ಅಡಿ ನಿವೇಶನವನ್ನು ಮಾರಾಟ ಮಾಡಿದ್ದಾರೆ. ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿ ಚಿನ್ನ, ಬೆಳ್ಳಿಯನ್ನು ಮಾರಾಟ ಮಾಡುತ್ತಿದ್ದರು. ಈಗ ನಿವೇಶನಗಳ ಮಾರಾಟವಾಗುತ್ತಿದೆ ಎಂದು ಲೇವಡಿ ಮಾಡಿದರು.
ಜಾರಿ ನಿರ್ದೇಶನಾಲಯ ಮುಡಾದಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾದ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಇದರಲ್ಲಿ ಸಿದ್ದರಾಮಯ್ಯನವರ ನಿವೇಶನ ಸಿಕ್ಕಿದರೆ ರಾಜಕೀಯ ಪ್ರೇರಿತ ಎಂದು ಆರೋಪಿಸುತ್ತಿದ್ದರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.