ಬೆಂಗಳೂರು,ಏ.29- ಕಳೆದ ವರ್ಷದ ಮುಂಗಾರು ಹಿಂಗಾರಿನಂತೆ ಈ ಬಾರಿಯ ಮುಂಗಾರು ಪೂರ್ವ ಮಳೆಯು ಕೈಕೊಟ್ಟಿದ್ದು, ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ದಾಖಲಾಗಿದ್ದು, ರಾಯಚೂರಿನಲ್ಲಿ ಅತ್ಯಧಿಕ 43 ಡಿ.ಸೆ.ನಷ್ಟು ದಾಖಲಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಕೂಡ 38.5ರಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಕೂಡ ದಾಖಲಾರ್ಹ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2016ರ ಏಪ್ರಿಲ್ 25ರಂದು ಬೆಂಗಳೂರು ನಗರದಲ್ಲಿ 39.2 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿತ್ತು. 1999ರ ಏ.3ರಂದು 38.3 ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2016ರ ಏಪ್ರಿಲ್ 25ರಂದು 38.3 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿತ್ತು.
ನಿನ್ನೆ 8 ವರ್ಷಗಳಲ್ಲೇ ಅತ್ಯಧಿಕ ಗರಿಷ್ಠ ತಾಪಮಾನ ಬೆಂಗಳೂರಿನಲ್ಲಿ ದಾಖಲಾಗಿದೆ. ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಬೇಸಿಗೆ ಅಥವಾ ಮುಂಗಾರು ಪೂರ್ವ ಮಳೆಯಾಗುವುದು ವಾಡಿಕೆ. ಏಪ್ರಿಲ್ ಮಧ್ಯ ಭಾಗದಲ್ಲಿ ರಾಜ್ಯದ ಕೆಲವೆಡೆ ಮಾತ್ರ ಮಳೆಯಾಗಿದ್ದನ್ನು ಬಿಟ್ಟರೆ ರಾಜ್ಯದಲ್ಲಿ ಉತ್ತಮ ಮಳೆಯಾಗಿಲ್ಲ. ಇದರಿಂದ ಗರಿಷ್ಠ ತಾಪಮಾನ ಹೆಚ್ಚಳವಾಗಿ ಬಿಸಿ ಗಾಳಿಯ ವಾತಾವರಣ ಕಂಡುಬರುತ್ತಿದೆ. ಇದರಿಂದ ಜನರು ತತ್ತರಿಸುವಂತಾಗಿದೆ.
ಜನರಿಗಷ್ಟೇ ಅಲ್ಲ ಜಾನುವಾರು ಹಾಗೂ ಕಾಡು ಪ್ರಾಣಿಗಳು ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ಕರ್ನಾಟಕ ಒಂದರ್ಥದಲ್ಲಿ ಬಿಸಿಲ ನಾಡಾಗಿ ಪರಿಣಮಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿಗಿಂತ ಹೆಚ್ಚಾಗಿ ಕಂಡುಬರುತ್ತಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ 34.4, ಬೀದರ್ 39.8 , ವಿಜಯಪುರ 41.2, ಬಾಗಲಕೋಟೆ 42.3, ಧಾರವಾಡ 39.2, ಗದಗ 40.2, ಕಲಬುರಗಿ 42.9, ಹಾವೇರಿ 39.8, ಕೊಪ್ಪಳ 42, ಚಾಮರಾಜನಗರ 40.1, ಚಿತ್ರದುರ್ಗ 39.8, ದಾವಣಗೆರೆ 40, ಮಂಡ್ಯ 39.6, ಶಿವಮೊಗ್ಗ 38.4 ಡಿ.ಸೆ.ನಷ್ಟು ದಾಖಲಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಒಣ ಹವೆ ಮುಂದುವರೆದಿದ್ದು, ಸದ್ಯಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ. ಆದರೆ ಮೇ ಮೊದಲ ವಾರದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ.