ಬೆಂಗಳೂರು,ಆ.19- ಯಾವುದೇ ಕಾರಣಕ್ಕೂ ಬಾಗಲಕೋಟೆಯಲ್ಲಿರುವ ಕೃಷಿ ವಿವಿಯನ್ನು ಮುಚ್ಚುವಾದಾಗಲೀ ಇಲ್ಲವೇ ಬೇರೆ ವಿವಿಗೆ ವಿಲೀನ ಮಾಡುವ ಪ್ರಶ್ನೆ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿಯವರು ಸ್ಪಷ್ಟಪಡಿಸಿದರು.ಸದಸ್ಯ ಹನುಮಂತ ನಿರಾಣಿಯವರು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಈ ಕುರಿತು ಪ್ರಶ್ನೆ ಮಾಡಿದರು.
ಸಚಿವರ ಪರವಾಗಿ ಉತ್ತರಿಸಿದ ಸಚಿವ ಚಲುವರಾಯಸ್ವಾಮಿ, ತೋಟಗಾರಿಕೆ ವಿವಿಯನ್ನು ಮುಚ್ಚುತ್ತೇವೆ ಎಂದು ಹೇಳುತ್ತಿರುವುದು ಸರಿಯಲ್ಲ. ಸರ್ಕಾರದ ಮುಂದೆ ಪ್ರಸ್ತಾವನೆ ಇಲ್ಲ. ವದಂತಿ ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು.ವಿವಿಯನ್ನು ಬೇರೆ ವಿವಿಗೆ ವಿಲೀನ ಮಾಡುವ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ. ಸಚಿವನಾಗಿ ನಾನು ಈ ಸದನಕ್ಕೆ ಸ್ಪಷ್ಟಪಡಿಸುತ್ತಿದ್ದೇನೆ. ಗಾಳಿಸುದ್ದಿಗಳಿಗೆ ಜನಪ್ರತಿನಿಧಿಗಳು ಇಲ್ಲವೇ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.
ಈ ವಿವಿಯನ್ನು ವಿಲೀನ ಮಾಡುವುದರ ಕುರಿತು ರಾಜ್ಯಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರಕ್ಕೆ ಈವರೆಗೂ ಅಂತಿಮ ವರದಿಯನ್ನು ಅವರು ಸಲ್ಲಿಸಿಲ್ಲ. ಮಾಧ್ಯಮಗಳಲ್ಲಿ ಬರುವ ಸುದ್ದಿಗೆ ನಾವು ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಅಧಿವೇಶನ ಮುಗಿಯುವದರೊಳಗೆ ವರದಿ ಸರ್ಕಾರಕ್ಕೆ ವರದಿಯನ್ನು ನೀಡಬಹುದು. ನಂತರ ಏನು ಕ್ರಮ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ. ಆದರೆ ಒಂದಂತೂ ಸತ್ಯ. ಯಾವುದೇ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ ಎಂದು ಪುನರುಚ್ಚರಿಸಿದರು.
ವರದಿ ಬಂದ ನಂತರ ಇದರ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಗುವುದು. ಅಗತ್ಯಬಿದ್ದರೆ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗುವುದಾಗಿ ಹೇಳಿದರು.
ಇದಕ್ಕೂ ಮುನ್ನ ಸದಸ್ಯರಾದ ಹನುಮಂತ ನಿರಾಣಿ ಮತ್ತು ಪಿ.ಎಚ್.ಪೂಜಾರ್ ಮಾತನಾಡಿ, ಬಾಗಲಕೋಟೆ ವಿವಿಯನ್ನು ಸರ್ಕಾರ ಬೇರೊಂದು ವಿವಿಗೆ ವಿಲೀನ ಮಾಡಬಾರದು. ರಾಜ್ಯದ ಸುಮಾರು 24 ಕಾಲೇಜುಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಇದನ್ನು ವಿಲೀನ ಮಾಡುತ್ತಿರುವುದಕ್ಕೆ ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ಗಮನ ಸೆಳೆದರು.
- ಮಾದಕ ವಸ್ತು ನಿರ್ಮೂಲನೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿ :ಸೀಮಂತ್ಕುಮಾರ್ ಸಿಂಗ್ ಮನವಿ
- ಬೆಂಗಳೂರು : ಮಹಿಳೆ ಸೇರಿ ಮೂವರು ವಿದೇಶಿಯರ ಬಂಧನ, 5.40 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ವಶ
- ಉಪ ರಾಷ್ಟ್ರಪತಿ ಚುನಾವಣೆ ಇಂಡಿ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಆಯ್ಕೆ
- ಕಟ್ಟಡದ ಸ್ವಾಧೀನ ಪತ್ರ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಇಲ್ಲ : ಸಚಿವ ಕೆ.ಜೆ.ಜಾರ್ಜ್
- ವಿಧಾನಸಭೆಯಲ್ಲಿ ಕಠಿಣ ಎಸ್ಮಾ ಕಾಯ್ದೆ ವಿಧೇಯಕ ಅಂಗೀಕಾರ