ಬೆಂಗಳೂರು, ಮೇ 8- ವಿಚಾರಣೆ ಹಾಜರಾಗಲು ಸಂಸದ ಪ್ರಜ್ವಲ್ ರೇವಣ್ಣ ಕೇಳಿದ್ದ ಕಾಲಾವಕಾಶ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಆತ ಇಂದು ವಿದೇಶದಿಂದ ವಾಪಸ್ ಆಗುವ ನಿರೀಕ್ಷೆಯಿದೆ. ಪೆನ್‌ಡ್ರೈವ್ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆಯಾದ ನಂತರ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು.
ಆ ಸಂದರ್ಭದಲ್ಲಿ ಪ್ರಜ್ವಲ್ ಅವರು ವಕೀಲರ ಮೂಲಕ ಕಾಲಾವಕಾಶ ಕೇಳಿದ್ದು, ಇಂದು ಅವ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಇಂದು ಅವರು ವಿದೇಶದಿಂದ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಎಸ್‌ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಒಂದು ವೇಳೆ ಪ್ರಜ್ವಲ್ ಇಂದು ವಿಚಾರಣೆಗೆ ಹಾಜರಾಗದಿದ್ದರೆ ಅವರು ಯಾವ ದೇಶದಲ್ಲಿ ಉಳಿದುಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ಎಸ್‌ಐಟಿ ಅಧಿಕಾರಿಗಳು ಕರೆತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರಜ್ವಲ್ ವಿರುದ್ಧ ಎಸ್‌ಐಟಿ ನೋಟಿಸ್‌ಗಳನ್ನು ಜಾರಿ ಮಾಡಿದ್ದು, ನಂತರ ಲುಕ್‌ಔಟ್ ನೋಟಿಸ್ ಹೊರಡಿಸಿತ್ತು. ಇದರ ಬೆನ್ನಲ್ಲೆ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಲಾಗಿದೆ.
ಪ್ರಜ್ವಲ್ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ, ಸಿಐಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.ಹಾಸನ ಜಿಲ್ಲೆಯಲ್ಲಿ ಪೆನ್‌ಡ್ರೈವ್ ಹಂಚಿಕೆಯಾದ ನಂತರ, ಲೋಕಸಭಾ ಚುನಾವಣೆ ಮತದಾನ ಮುಗಿದ ಬಳಿಕ ಪ್ರಜ್ವಲ್ ಜರ್ಮನಿಗೆ ಹೋಗಿದ್ದಾರೆ.