ನವದೆಹಲಿ, ಜ.4- ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಮೇಲೆ ಇಂಡಿ ಒಕ್ಕೂಟದ ಮಿತ್ರ ಪಕ್ಷಗಳಿಗೆ ನಂಬಿಕೆಯೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿ ಒಕ್ಕೂಟದ ಮಿತ್ರ ಪಕ್ಷಗಳೇ ಇಂದು ತನ್ನನ್ನು ಬೆಂಬಲಿಸದಂತಹ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ ಎಂದು ಟೀಕಿಸಿದರು. ಸಮಾಜವಾದಿ ಪಾರ್ಟಿ ಇಂಡಿ ಒಕ್ಕೂಟದ ಅಂಗ ಪಕ್ಷವೇ ಆಗಿದ್ದರೂ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬದಲು ಆಮ್ ಆದಿ ಪಾರ್ಟಿಯನ್ನು ಬೆಂಬಲಿಸುತ್ತಿದೆ.
ಹೀಗೆ ಇಂಡಿ ಒಕ್ಕೂಟದ ಎಲ್ಲಾ ಮಿತ್ರಪಕ್ಷಗಳು ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಳ್ಳುತ್ತಿವೆ ಎಂದು ಹೇಳಿದರು. ಶರದ್ ಪವಾರ್ ಅವರು ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತೇನೆ, ರಾಹುಲ್ ಗಾಂಧಿ ಅವರನ್ನಲ್ಲ ಎಂದರು. ಅದೇ ರೀತಿ ಮಮತಾ ಬ್ಯಾನರ್ಜಿ, ಓಮರ್ ಅಬ್ದುಲ್ಲಾ ಸೇರಿದಂತೆ ಯಾರೊಬ್ಬರೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸಲು ಸಿದ್ಧರಿಲ್ಲ. ಅಂದರೆ ಕಾಂಗ್ರೆಸ್ ಅಷ್ಟರ ಮಟ್ಟಿಗೆ ವಿಶ್ವಾಸ ಕಳೆದುಕೊಂಡಿದೆ ಎಂದರು.
ಮಿತ್ರರ ಬುದ್ಧಿಮಾತು ಕೇಳಲಿ: ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಹುಲ್ ಗಾಂಧಿ ಸುಧಾರಣೆ ಕಾಣಬೇಕು ಎಂದು ಮಿತ್ರಪಕ್ಷಗಳೇ ಬುದ್ಧಿಮಾತು ಹೇಳುತ್ತಿವೆ. ರಾಹುಲ್ ಗಾಂಧಿ ವಾಸ್ತವ ಅರಿತುಕೊಳ್ಳಬೇಕು. ನಮ ಮಾತು ಬೇಡ ಮಿತ್ರರ ಮಾತನ್ನದರೂ ಕೇಳಲಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಸೋಲೊಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಇಂಡಿ ಮೈತ್ರಿಕೂಟದ ಇತರ ಮಿತ್ರ ಪಕ್ಷಗಳು ಅದರಿಂದ ದೂರ ಸರಿಯುತ್ತಿವೆ. ಆದರೂ ಕಾಂಗ್ರೆಸ್ ಇನ್ನೂ ಸುಧಾರಿಸಿಕೊಳ್ಳಲು ಸಿದ್ಧವಾಗಿಲ್ಲ ಎಂದು ಜೋಶಿ ಟೀಕಿಸಿದರು. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರು ಜನರ ತೀರ್ಪನ್ನು ಗೌರವದ ಭಾವನೆಯಿಂದ ಸ್ವೀಕರಿಸಬೇಕು.
ಅದನ್ನು ಬಿಟ್ಟು ಇವಿಎಂ ಮೇಲೆ, ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸತ್ತಾ ಲಘುವಾಗಿ ಮಾತನಾಡುವುದು ಸಲ್ಲದು ಎಂದು ಆಕ್ಷೇಪಿಸಿದರು. ಈಗ ಮತದಾರರ ಮೇಲೆ ಇವರಿಗೆ ಶಂಕೆ ಶುರುವಾಗಿದೆ. ಹಾಗಾಗಿ ರಾಹುಲ್ ಗಾಂಧಿ ಲಘು ಹೇಳಿಕೆ ನೀಡುತ್ತಿದ್ದಾರೆ. ನಾವು ಕರ್ನಾಟಕ ಮತ್ತು ಜಾರ್ಖಂಡ್ ಸೋಲನ್ನು ಒಪ್ಪಿಕೊಂಡಂತೆ ಕಾಂಗ್ರೆಸ್ ಇತರೆ ರಾಜ್ಯಗಳಲ್ಲಾದ ಸೋಲನ್ನು ಸ್ವೀಕರಿಸದೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.