ಜಮು,ಡಿ.5- ಜಮ್ಮು-ಕಾಶ್ಮೀರದ ರಾಜ್ಯದ ಕತ್ರಾದ ಉಪವಿಭಾಗದ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸಾಹಾರಿ ಆಹಾರದ ಮಾರಾಟ, ಸ್ವಾಧೀನ ಮತ್ತು ಸೇವನೆಯನ್ನು ಪ್ರತಿಬಂಧಿಸಿ ಕತ್ರಾದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪಿಯೂಷ್ ಧೋತ್ರಾ ನಿಷೇಧಾಜ್ಞೆ ಹೊರಡಿಸಿದ್ದಾರೆ. ಜಮು ಮತ್ತು ಕಾಶೀರದ ರಿಯಾಸಿ ಜಿಲ್ಲೆಯ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಮೂಲ ಶಿಬಿರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಬಿಎನ್‌ಎಸ್‌ಎಸ್ ಸೆಕ್ಷನ್ 163 ರ ಅಡಿ ಜಾರಿಗೊಳಿಸಲಾದ ಈ ಕ್ರಮವು ಪೂಜ್ಯ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಟ್ರ್ಯಾಕ್ ಸೇರಿದಂತೆ ಕತ್ರಾ ಮತ್ತು ಪಕ್ಕದ ಪ್ರದೇಶಗಳಿಗೆ ಅನ್ವಯಿಸುವಂತೆ ಈ ಆದೇಶ ಹೊರಡಿಸಲಾಗಿದೆ. ಈ ಆದೇಶ ಎರಡು ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಕಟಣೆ ಹೊರಡಿಸಿದೆ.
ಈ ಎಲ್ಲ ಕಡೆ ನಿಷೇಧ ಜಾರಿಯಲ್ಲಿರಲಿದೆ. ಕತ್ರಾದಿಂದ ಹೋಲಿ ಕೇವ್ ಟ್ರ್ಯಾಕ್ ಮತ್ತು ಹತ್ತಿರದ ರಸ್ತೆಗಳಿಂದ ಎರಡು ಕಿಲೋಮೀಟರ್‌ವ್ಯಾಪ್ತಿಯಲ್ಲಿರುವ ಹಳ್ಳಿಗಳು ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳಲ್ಲಿ ನಿಷೇಧವು ಅನ್ವಯವಾಗಲಿದೆ. ಇದು ನಿರ್ದಿಷ್ಟವಾಗಿ ಅರ್ಲಿ, ಹಂಸಾಲಿ ಮತ್ತು ಮಟ್ಯಾಲ್ನಂತಹ ಪ್ರದೇಶಗಳನ್ನು ಒಳಗೊಳ್ಳುತ್ತದೆ.
ಅಷ್ಟೇ ಅಲ್ಲದೇ ಕತ್ರಾ-ಟಿಕ್ರಿ, ಕತ್ರಾ-ಜಮು, ಕತ್ರಾ-ರಿಯಾಸಿ ಮತ್ತು ಪಂಥಾಲ್-ಡೊಮೈಲ್ ರಸ್ತೆಗಳ ಉದ್ದಕ್ಕೂ ಈ ಆದೇಶ ಜಾರಿಯಲ್ಲಿರಲಿದೆ. ಚಂಬಾ, ಸೆರ್ಲಿ, ಭಗ್ತಾ, ಕುಂಡೋರಿಯನ್, ಕೋಟ್ಲಿ ಬಜಾಲಿಯನ್, ನೊಮೈನ್, ಮಾಘಲ್, ನೌ ದೇವಿಯಾನ್ ಮತ್ತು ಅರ್ಘ ಜಿಟ್ಟೋ ಮುಂತಾದ ಗ್ರಾಮಗಳು ಸಹ ಆದೇಶದ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ದೇಗುಲ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶದಿಂದ ಈ ಆದೇಶ ಜಾರಿ ಮಾಡಲಾಗಿದೆ. ಮತ್ತು ದೇಗುಲದ ಪಾವಿತ್ರ್ಯತೆ ಕಾಪಾಡುವ ಗುರಿಯನ್ನು ಈ ಆದೇಶ ಹೊಂದಿದೆ. ನಿಷೇಧವು ಎಲ್ಲಾ ರೀತಿಯ ಮಾಂಸಾಹಾರಿ ಆಹಾರವನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಮೊಟ್ಟೆಗಳು, ಕೋಳಿ, ಮಾಂಸ, ಸಮುದ್ರಾಹಾರ ಮತ್ತು ಇತರ ಪ್ರಾಣಿ – ಆಧಾರಿತ ಉತ್ಪನ್ನಗಳನ್ನು ಒಳಗೊಂಡಿದೆ.
ಕತ್ರಾ ರೈಲು ನಿಲ್ದಾಣದ ಬಳಿ ಸೇರಿದಂತೆ ಕತ್ರಾಕ್ಕೆ ಹೋಗುವ ಪ್ರಮುಖ ಮಾರ್ಗಗಳಲ್ಲಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಯಾತ್ರಾರ್ಥಿಗಳಿಗೆ ಸಾಮರಸ್ಯ ಮತ್ತು ಗೌರವಯುತ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ನಿರ್ಬಂಧಗಳನ್ನು ಅನುಸರಿಸಲು ನಿವಾಸಿಗಳು ಮತ್ತು ಸಂದರ್ಶಕರಲ್ಲಿ ಮನವಿ ಮಾಡಲಾಗಿದೆ.