ಬೆಂಗಳೂರು,ಜು.14- ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದ್ದರೂ ಪ್ರವಾಹ ಭೀತಿ ಮಾತ್ರ ದೂರವಾಗಿಲ್ಲ. ಕಳೆದ ಎರಡು ವಾರಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಆರ್ಭಟಿಸುತ್ತಿದ್ದ ಮಳೆ ಪ್ರಮಾಣ ತುಸು ಕಡಿಮೆಯಾಗಿದೆ. ಆದರೂ, ಹಳ್ಳ-ಕೊಳ್ಳ, ನದಿಗಳ ಪ್ರವಾಹ ಮಾತ್ರ ಮುಂದುವರೆದಿದೆ.
ಉತ್ತರ ಕರ್ನಾಟಕ ಭಾಗದ ಕೃಷ್ಣಾ, ತುಂಗಭದ್ರಾ ನದಿ ಪಾತ್ರದಲ್ಲೂ ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ಸೇತುವೆಗಳು ಕೂಡ ಮುಳುಗಡೆಯಾಗಿ ಸಂಚಾರ ನಿರ್ಬಂಧಿಸಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಮಳೆ ಇನ್ನೂ ಮುಂದುವರೆಯುತ್ತಿದೆ. ಹೀಗಾಗಿ ಜಲಾಶಯಗಳ ಒಳಹರಿವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ.
ಕಾವೇರಿಕೊಳ್ಳದಲ್ಲಿ ಮಳೆ ಪ್ರಮಾಣದ ಇಳಿಕೆಯಾಗಿದ್ದು, ಜಲಾಶಯದ ಒಳ ಹಾಗೂ ಹೊರ ಹರಿವು ಕೂಡ ಕಡಿಮೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ಕೆಲವೆಡೆ ನಿನ್ನೆಯೂ ಉತ್ತಮ ಮಳೆಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಭಾರೀ ಮಳೆಯಾಗಿದೆ. ಕೆಲವೆಡೆ ರಸ್ತೆಗೆ ಮರಗಳು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾಕೊಳ್ಳದಲ್ಲೂ ಪ್ರವಾಹ ಭೀತಿ ಎದುರಾಗಿದೆ. ಚಿಕ್ಕೋಡಿ ವ್ಯಾಪ್ತಿಯಲ್ಲಿ ನೆರೆ ಹಾವಳಿಯಿಂದ ಸೇತುವೆ, ಹೊಲ, ಗದ್ದೆಗಳು ಜಲಾವೃತವಾಗಿವೆ. ಜನರು ಪ್ರವಾಹದ ಭೀತಿಯಲ್ಲೇ ಕಾಲ ಕಳೆಯುವಂತಾಗಿದೆ.
ತಂಗಭದ್ರಾ ಜಲಶಾಯದಿಂದ 1.25 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದ್ದು, ಅಪಾರ ಪ್ರಮಾಣದ ಕೃಷಿ ಭೂಮಿ ಜಲಾವೃತವಾಗಿದೆ. ಕಂಪ್ಲಿ, ಗಂಗಾವತಿ, ಕೊಪ್ಪಳ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ಹಾಗೆಯೇ ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲಿನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಕೂಡ ಬಹುತೇಕ ಭರ್ತಿಯಾಗುತ್ತಿದ್ದು, ಈ ಜಲಾಶಯಗಳಿಂದಲೂ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ. ಕಬಿನಿ, ಹಾರಂಗಿ, ಕೆಆರ್‍ಎಸ್ ಹಾಗೂ ಹೇಮಾವತಿ ಜಲಾಶಯಗಳಿಂದಲೂ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದೆ. ಬಹಳಷ್ಟು ಬೆಳೆಯೂ ಕೂಡ ಜಲಾವೃತವಾಗಿ ಸಾಕಷ್ಟು ನಷ್ಟ ಸಂಭವಿಸಿದೆ.
ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ವರಾಹಿ, ಸೂಪಾ ಜಲಾಶಯಗಳಿಗೂ ಒಳಹರಿವು ನಿರಂತರವಾಗಿ ಬರುತ್ತಿದೆ.
ಹವಾಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ. ಉಳಿದಂತೆ ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ.
ಆದರೆ, ಕಳೆದ ಎರಡು ವಾರಗಳಿಂದ ಭಾರೀ ಮಳೆಯಾದಂತೆ ಮುಂದಿನ ದಿನಗಳಲ್ಲೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ವಿರಳ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.