Friday, November 22, 2024
Homeರಾಜ್ಯವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 283 ಕೋಟಿ ರೂ ಬಾಕಿ ಉಳಿಸಿಕೊಂಡ ಗ್ಯಾರಂಟಿ ಸರ್ಕಾರ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 283 ಕೋಟಿ ರೂ ಬಾಕಿ ಉಳಿಸಿಕೊಂಡ ಗ್ಯಾರಂಟಿ ಸರ್ಕಾರ

ಹುಬ್ಬಳ್ಳಿ, ಮೇ 26- ಸಾರಿಗೆ ಸಂಸ್ಥೆಯ ಬಸ್‌‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಕರ್ನಾಟಕ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮರು ಪಾವತಿಸಬೇಕಾದ ಮೊತ್ತದಲ್ಲಿ ರಾಜ್ಯ ಸರ್ಕಾರ 283 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

2023ರ ಜೂನ್‌ 11ರಂದು ಈ ಯೋಜನೆ ಜಾರಿಗೆ ಬಂದಿತ್ತು. ಅಂದಿನಿಂದ ಇಲ್ಲಿಯವರೆಗೆ ಯಾವುದೇ ತಿಂಗಳು ಸಹ ರಾಜ್ಯ ಸರ್ಕಾರ ಪೂರ್ಣ ಮೊತ್ತವನ್ನು ಮರು ಪಾವತಿ ಮಾಡಿಲ್ಲ. ಇದರ ಪರಿಣಾಮವಾಗಿ ಬಾಕಿ 300 ಕೋಟಿ ರೂ. ಸಮೀಪ ಬಂದು ಮುಟ್ಟಿದೆ. ಯೋಜನೆ ಆರಂಭದಿಂದ ಈ ವರ್ಷದ ಏಪ್ರಿಲ್‌ ಅಂತ್ಯದವರೆಗೆ ಮಹಿಳೆಯರಿಗೆ 46,42,11,425 ಶೂನ್ಯ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಇದರ ಒಟ್ಟು ಪ್ರಯಾಣ ವೆಚ್ಚ 1193,86,33,524 ರೂ. ಗಳಾಗಿವೆ. ಇದರಲ್ಲಿ ರಾಜ್ಯ ಸರ್ಕಾರ, ವಾಕರಸಾ ಸಂಸ್ಥೆಗೆ ಇಲ್ಲಿಯವರೆಗೆ 894,90,52,000 ರೂ. ಪಾವತಿ ಮಾಡಿದೆ.

ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ, ವಾಕರಸಾ ಸಂಸ್ಥೆಗೆ ಮರು ಪಾವತಿಯಲ್ಲಿ ಪ್ರತಿ ತಿಂಗಳು 15ರಿಂದ 40 ಕೋಟಿ ರೂ. ವರೆಗೆ ಬಾಕಿ ಉಳಿಸಿಕೊಳ್ಳುತ್ತ ಬಂದಿದೆ. ಆದರೆ, ಮಾರ್ಚ್‌ ತಿಂಗಳಲ್ಲಿ ಶೂನ್ಯ ಟಿಕೆಟ್‌ ಮೊತ್ತಕ್ಕಿಂತ ಹೆಚ್ಚಿನ ಹಣ ಮರು ಪಾವತಿ ಮಾಡಿರುವುದು ವಿಶೇಷ. ಎರಡು ಕಂತುಗಳಲ್ಲಿ 157.36 ಕೋಟಿ ರೂ. ಪಾವತಿಸಿತ್ತು. ಆರ್ಥಿಕ ವರ್ಷದ ಕೊನೆಯ ತಿಂಗಳು ಎಂಬುದು ಇದಕ್ಕೆ ಕಾರಣ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಇತ್ತೀಚಿನ ತಿಂಗಳಲ್ಲಿ ಶಕ್ತಿಯೋಜನೆಯ ಲಾನುಭವಿಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಏಪ್ರಿಲ್‌ ತಿಂಗಳು ಹೊರತು ಪಡಿಸಿ ಶೂನ್ಯ ಟಿಕೆಟ್‌ ಮೊತ್ತದಲ್ಲೂ ಗಮನಾರ್ಹ ಏರಿಕೆ ಏನೂ ಆಗಿಲ್ಲ. ಸಮಾಧಾನಕರ ಸಂಗತಿಯೆಂದರೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳ ಮರು ಪಾವತಿ ಮೊತ್ತ ಏರಿಕೆಯಾಗಿರುವುದು. ಏಪ್ರಿಲ್‌ ತಿಂಗಳಲ್ಲಿ ಅತ್ಯಧಿಕ 102.68 ಕೋಟಿ ರೂ. ಪಾವತಿಸಿದೆ. ಮೇ ತಿಂಗಳು ಮುಗಿಯುವ ಮೊದಲೇ 102.68 ಕೋಟಿ ರೂ. ಪಾವತಿಸಿರುವುದು ಗಮನಾರ್ಹ ಅಂಶವಾಗಿದೆ.

ವಾಕರಸಾ ಸಂಸ್ಥೆಯು ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ.ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ, ಸಂಸ್ಥೆಗೆ ಇಲ್ಲಿಯವರೆಗೆ 895 ಕೋಟಿ ರೂ. ಮರು ಪಾವತಿ ಮಾಡಿದೆ. 298 ಕೋಟಿ ರೂ. ಬಾಕಿ ಬರಬೇಕಿದೆ. ಪ್ರತಿ ತಿಂಗಳು ಸರ್ಕಾರದಿಂದ ಬರಬೇಕಾದ ಮರು ಪಾವತಿ ಮೊತ್ತ ಹಾಗೂ ಬಾಕಿ ಮೊತ್ತದ ಬಗ್ಗೆ ವರದಿ ಸಲ್ಲಿಸಲಾಗುತ್ತದೆ ಎಂಬ ಕುರಿತು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಂಡಿ ಪ್ರಿಯಾಂಗಾ ಮಾಹಿತಿ ನೀಡಿದ್ದಾರೆ.

RELATED ARTICLES

Latest News