ಬೆಂಗಳೂರು,ಮೇ 2– ನಗರದಲ್ಲಿ ಪ್ರತಿ ಬಾರಿ ಮಳೆಯಾದಾಗಲೂ ಒಂದೊಂದು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇದರಿಂದ ಬ್ರ್ಯಾಂಡ್ ಬೆಂಗಳೂರು ಎಂಬುದರ ಬದಲು ಮರಣ ಬೆಂಗಳೂರು ಎಂದು ಕರೆಯುವುದು ಸೂಕ್ತ ಎಂದು ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಹಾಗೂ ಮಾಜಿ ಉಪ ಮೇಯರ್ ಎಸ್.ಹರೀಶ್ ಕಿಡಿ ಕಾರಿದ್ದಾರೆ.
ಕಳೆದ ಬಾರಿ ಮಳೆ ಬಿದ್ದಾಗಲೂ ಒಬ್ಬ ಅಮಾಯಕ ಆಟೋ ಚಾಲಕ ಮೃತಪಟ್ಟಿದ್ದ, ಈಗ ಇನ್ನು ಮಳೆಗಾಲವೇ ಆರಂಭವಾಗಿಲ್ಲ ಆಗಲೇ ಮತ್ತೊಬ್ಬ ಚಾಲಕ ಮೃತಪಟ್ಟಿದ್ದಾನೆ. ಈ ಹಿಂದೆ ಕೂಡ ಹಲವಾರು ಮಂದಿ ಮಳೆ ಅನಾಹುತಗಳಿಗೆ ಬಲಿಯಾಗಿದ್ದಾರೆ ಆದರೂ ಸರ್ಕಾರ ಮಾತ್ರ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಾಸ್ಯಾಸ್ಪದ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಇಡಿ ನಗರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುತ್ತೇವೆ, ನಗರದ ರಸ್ತೆ ಗುಂಡಿಗಳಿಗೆ ಮುಕ್ತಿ ಹಾಡುತ್ತೇವೆ ಎಂದು ಬೊಬ್ಬೆ ಹೊಡೆಯುವ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಳೆಗಾಲದಲ್ಲಿ ಸಡಿಲಗೊಂಡಿರುವ ಮರಗಳು, ಕೊಂಬೆಗಳು ಮತ್ತು ರೆಂಬೆಗಳನ್ನು ತೆರವುಗೊಳಿಸಬೇಕು ಎಂಬ ಕನಿಷ್ಠ ಜ್ಞಾನ ಇಲ್ಲದಿರುವುದು ಅವಮಾನಕರ ಎಂದು ಅವರು ಲೇವಡಿ ಮಾಡಿದ್ದಾರೆ.
ಕಳೆದ ಬಾರಿ ಮಳೆಯಾದ ಸಂದರ್ಭದಲ್ಲಿ ಆಟೋ ಚಾಲಕನೊಬ್ಬ ಮಳೆ ಅನಾಹುತಕ್ಕೆ ಬಲಿಯಾದ ಸಂದರ್ಭದಲ್ಲಿ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಲು ಬಿಡುವುದಿಲ್ಲ ಎಂದು ಡಿಕೆಶಿ ಬಡಾಯಿ ಕೊಚ್ಚಿಕೊಂಡಿದ್ದರು. ಇದೀಗ ಮಳೆ ಅನಾಹುತಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಇದಕ್ಕೆ ನಿಮ ಉತ್ತರವೇನೂ ಶಿವಕುಮಾರ್ ಅವರೇ ಎಂದು ಹರೀಶ್ ಪ್ರಶ್ನಿಸಿದ್ದಾರೆ.
ಇದನ್ನೆಲ್ಲಾ ನೋಡಿದರೆ ನೀವು ನೀಡುತ್ತಿರುವ ಗ್ಯಾರಂಟಿ ಯೋಜನೆಗಳಲ್ಲಿ ನಗರದ ನಿವಾಸಿಗಳಿಗೆ 7 ನೇ ಮರಣ ಗ್ಯಾರಂಟಿ ಯೋಜನೆ ಘೋಷಿಸಿರುವಂತೆ ಕಾಣುತ್ತಿದೆ ಎಂದು ಅವರು ಅಪಹಾಸ್ಯ ಮಾಡಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ ಮುಂದಿನ ಮಳೆಗಾಲದಲ್ಲಿ ಸಂಭವಿಸುವ ಅನಾಹುತಗಳನ್ನು ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಶಿವಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಇಲ್ಲದಿದ್ದರೆ ನಗರದ ಪ್ರಜ್ಞಾವಂತ ನಾಗರಿಕರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.