ಬೆಂಗಳೂರು,ಡಿ.5- ಕೇವಲ 5 ವರ್ಷ ಮಾತ್ರವಲ್ಲ. ಮುಂದಿನ 15 ವರ್ಷಗಳವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಬೇಕು ಎಂಬುದು ನಮ ಅಭಿಲಾಷೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಶಕ್ತಿಹೀನರಲ್ಲ. ಅವರಿಗೆ ಈಗಿರುವ ಶಕ್ತಿ ತುಂಬಿ ತುಳುಕುತ್ತಿದೆ. ಹೀಗಾಗಿ ಅವರಿಗೆ ಶಕ್ತಿ ತುಂಬುವ ಸಲುವಾಗಿ ಸಮಾವೇಶ ನಡೆಯುತ್ತಿದೆ ಎಂಬುದು ಅವಾಸ್ತವಿಕ ಎಂದರು.
ಕಾಂಗ್ರೆಸ್‌ನಲ್ಲಿ ಅಧಿಕಾರ ಕೊಡುವುದು ಅಥವಾ ತೆಗೆದುಕೊಳ್ಳುವುದು ಹೈಕಮಾಂಡ್‌ನ ನಿರ್ಧಾರಕ್ಕೆ ಬಿಟ್ಟ ವಿಚಾರ. ನಮ ಅನಿಸಿಕೆ ಪ್ರಕಾರ, ಇನ್ನೂ 15 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂಬುದಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಸಮಾವೇಶ ನಡೆಸಲಾಗುತ್ತಿದೆ. ಇದರಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಸನ ಜೆಡಿಎಸ್‌ನ ಭದ್ರಕೋಟೆಯಲ್ಲ. ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಏನಾಗಿದೆ?, ಅನಗತ್ಯವಾಗಿ ಭದ್ರಕೋಟೆ ಎಂಬ ಭ್ರಮೆ ಹುಟ್ಟಿಸುವುದು ಬೇಡ ಎಂದರು.
ಅಧಿಕಾರದಲ್ಲಿದ್ದಾಗ ಎಲ್ಲರೂ ಅವರದೇ ಆದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ. ರಾಜಕಾರಣಕ್ಕೆ ಬಂದವರು ಕೆಲಸ ಮಾಡಬಾರದು ಎಂದು ಇರುವುದಿಲ್ಲ. ಕಾಲಕ್ಕನುಗುಣವಾಗಿ ಸಾಮರ್ಥ್ಯನುಸಾರ ಕೆಲಸಗಳಾಗಿರುತ್ತವೆ. ಯಾರ ಕೊಡುಗೆಯನ್ನು ಯಾರೂ ಮರೆಮಾಚಲು ಸಾಧ್ಯವಿಲ್ಲ ಎಂದು ಹೇಳಿದರು.