ಮೈಸೂರು,ಅ.17- ಮುಡಾ ಹಗರಣ ಸಂಬಂಧ ಮರಿಗೌಡ ಅಷ್ಟೇ ಅಲ್ಲ ಸಚಿವ ಮಹದೇವಪ್ಪ ಕೂಡ ರಾಜೀನಾಮೆ ನೀಡುತ್ತಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸ್ನೇಹಮಯಿ ಕೃಷ್ಣ, ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಮುಡಾ ಹಗರಣದಲ್ಲಿ ಎಲ್ಲರೂ ಕೂಡ ರಾಜೀನಾಮೆ ಕೊಟ್ಟು ಜೈಲಿಗೆ ಹೋಗುವ ಸಮಯ ಬರುತ್ತದೆ. ಸಚಿವ ಮಹದೇವಪ್ಪ ಕೂಡ ಅಕ್ರಮಗಳಿಗೆ ಸಹಕಾರ ನೀಡಿದ್ದಾರೆ. ಮಹದೇವಪ್ಪ ತಮ್ಮ ಮಗ ಸುನೀನ್ ಬೋಸ್ ಹೆಸರಲ್ಲಿ ಸೆಟೆಲ್‌ಮೆಂಟ್ ಡೀಲ್ ಮೂಲಕ ಸೈಟ್ ಪಡೆದುಕೊಂಡಿದ್ದಾರೆ. ಇದಕ್ಕೆ ಮಹದೇವಪ್ಪ ಸಹಕಾರ ಇದೆ ಎಂದವರು ಆರೋಪಿಸಿದರು.
ಸಿಎಂ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬ ಮರಿಗೌಡ ಹೇಳಿಕೆ ಸುಳ್ಳು. ತಪ್ಪು ಮಾಡಿದ್ದಾರೆ ರಾಜೀನಾಮೆ ಕೊಟ್ಟಿದ್ದಾರೆ. ಜನರಿಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಅನೇಕರು ರಾಜೀನಾಮೆ ಕೊಡುತ್ತಾರೆ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಸಿಎಂ ಸೇರಿ ಹಲವರು ರಾಜೀನಾಮೆ ಕೊಡುತ್ತಾರೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.
ತನ್ನ ವಿರುದ್ದ ವಾಗ್ದಾಳಿ ನಡೆಸಿ ಲೋಕಾಯುಕ್ತಕ್ಕೆ ದೂರು ನೀಡಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ದ ಕಿಡಿಕಾರಿದ ಸ್ನೇಹಮಯಿ ಕೃಷ್ಣ, ತಾಕತ್ತಿದ್ದರೆ ದಾಖಲೆ ಮುಂದಿಟ್ಟುಕೊಂಡು ಮಾತನಾಡಲಿ ಎಂದು ಸವಾಲು ಹಾಕಿದರು.
ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ಲಕ್ಷ್ಮಣ್ ದೂರು ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ಈ ಬೆದರಿಕೆಗೆ ನಾನು ಹೆದರುವುದಿಲ್ಲ. ಲಕ್ಷ್ಮಣ್ ಸಾಧನೆ ಏನು ? ಸುಖ ಸುಮ್ಮನೆ ಆರೋಪ ಮಾಡ್ತಾರೆ. ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ನಾನು ಸವಾಲ್ ಹಾಕುತ್ತೇನೆ. ಲಕ್ಷ್ಮಣ್ ಗೆ ತಾಕ್ಕತ್ತಿದ್ದರೆ ನನ್ನ ವಿರುದ್ಧ ದಾಖಲೆ ಇಟ್ಟು ಮಾತನಾಡಲಿ ಎಂದು ಅವರು ಸವಾಲು ಹಾಕಿದರು.
ನಾನೊಬ್ಬ ದೂರುದಾರ ನನ್ನ ಈ ರೀತಿ ಬೆದರಿಸಲು ನೋಡಿದರೆ ನಾನು ಹೆದರಲ್ಲ. 100 ಕೋಟಿ ಕೇಳಿದ್ದರು. ಬ್ಲಾಕ್ ಮೇಲರ್ ಅಂತಾರೆ. ಯಾರಿಗೆ ಕೇಳಿದ್ದೇ ಕರೆದುಕೊಂಡು ಬನ್ನಿ ಅಂದರೆ ಮಾತೆ ಇಲ್ಲ. ಲಕ್ಷ್ಮಣ್ ದೂರು ನೀಡಿರುವ ಅರ್ಜಿಯನ್ನು ಕೋರ್ಟ್ ಗೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಲಕ್ಷ್ಮಣ್ ಕೂಡ ಮುಡಾ ಕಂಟಕವಾಗಲಿದೆ ಎಂದು ಎಚ್ಚರಿಕೆ ನೀಡಿದರು.