ಬೆಂಗಳೂರು,ಆ.31- ನಟ ದರ್ಶನ್ ಹಾಗೂ ಕುಖ್ಯಾತ ರೌಡಿಗಳಿಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿದ ಬಗ್ಗೆ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಯನ್ನು ಒಂದು ತಿಂಗಳೊಳಗೆ ಮುಗಿಸಬೇಕೆಂದು ತಂಡಗಳಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂರು ತನಿಖಾ ತಂಡಗಳೂ ತನಿಖೆಯನ್ನು ಚುರುಕುಗೊಳಿಸಿದ್ದು, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ, ಹೇಳಿಕೆ ಪಡೆದುಕೊಳ್ಳುತ್ತಿವೆ.
ನಟ ದರ್ಶನ್ ಹಾಗೂ ಕುಖ್ಯಾತ ರೌಡಿಗಳಿಗೆ ಯಾವ ಯಾವ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದೀರಾ, ಎಷ್ಟು ದಿನಗಳಿಂದ ಈ ಎಲ್ಲಾ ಸವಲತ್ತುಗಳನ್ನು ಕೊಟ್ಟಿದ್ದೀರಾ, ಬೇರೆ ಖೈದಿ, ವಿಚಾರಣಾ ಖೈದಿಗಳಿಗೂ ಈ ರೀತಿಯ ಸೌಲಭ್ಯಗಳನ್ನು ನೀಡಿದ್ದೀರಾ? ಎಂಬೆಲ್ಲಾ ಬಗ್ಗೆ ಮೂರು ತನಿಖಾ ತಂಡಗಳು ಅಲ್ಲಿನ ಸಿಬ್ಬಂದಿಗಳು, ಹಿರಿಯ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿವೆ.
ನಟ ದರ್ಶನ್ ಹಾಗೂ ರೌಡಿಗಳಿಗೆ ರಾಜಾತಿಥ್ಯ ನೀಡುತ್ತಿದ್ದ ಫೋಟೊಗಳು ವೈರಲ್ ಆಗುತ್ತಿದ್ದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಜೈಲಧಿಕಾರಿಗಳು ಕರ್ತವ್ಯಲೋಪ ಎಸಗಿರುವ ಬಗ್ಗೆ ಎಲೆಕ್ಟ್ರಾನ್ ಸಿಟಿ ಉಪವಿಭಾಗದ ಎಸಿಪಿಯವರು, ಉಳಿದ ಎರಡು ಪ್ರಕರಣಗಳನ್ನು ಪರಪ್ಪನ ಅಗ್ರಹಾರ ಹಾಗೂ ಬಂಡೆಪಾಳ್ಯ ಠಾಣೆಯ ಇನ್‌್ಸಪೆಕ್ಟರ್‌ಗಳು ತನಿಖೆ ನಡೆಸುತ್ತಿದ್ದಾರೆ.