ಹುಬ್ಬಳ್ಳಿ,ಡಿ.28- ಮನೆಯ ಬಾಗಿಲು ಮುರಿದು ಒಳನುಗ್ಗಿ ದಂಪತಿಯ ಕೈಕಾಲು ಕಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿ ಪರಾರಿಯಾಗಿದ್ದ ನಟೋರಿಯಸ್ ಚಡ್ಡಿ ಗ್ಯಾಂಗ್ನ ದರೋಡೆಕೋರನೊಬ್ಬ ಇಂದು ಮುಂಜಾನೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.
ಪಾಲವೆಂಕಟೇಶ್ವರ್ ಅಲಿಯಾಸ್ ಕಲ್ಯಾಣಕುಮಾರ್ ಗುಂಡೇಟಿನಿಂದ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರೋಡೆಕೋರ. ಕಳೆದ 6 ತಿಂಗಳ ಹಿಂದೆ ರಾತ್ರಿ ವೇಳೆ ಧಾರ ವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ
ಎಸ್ಡಿಎಂ ಆಸ್ಪತ್ರೆಯ ಹಿಂಭಾಗದ ಅಶೋಕ ಕದಂ ಎಂಬುವರ ಮನೆ ಬಾಗಿಲನ್ನು ಮುರಿದು ಒಳನುಗ್ಗಿ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ಬೆನ್ನತ್ತಿದ್ದ ವಿದ್ಯಾಗಿರಿ ಠಾಣೆಯ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆರೋಪಿಗಳು ಆಂಧ್ರಪ್ರದೇಶದ ಕರ್ನುಲ್ನ ನಟೋರಿಯಸ್ ಚಡ್ಡಿ ಗ್ಯಾಂಗ್ ಎನ್ನುವುದನ್ನು ಪತ್ತೆಹಚ್ಚಿದ್ದಾರೆ. ಈ ಪ್ರಕರಣವನ್ನು ವಿದ್ಯಾಗಿರಿ ಠಾಣೆಯ ಪೊಲೀಸರು ಬೆನ್ನತ್ತಿದ್ದರು.
ಈ ಪ್ರಕರಣ ಮಾಸುವ ಮುನ್ನವೇ ಇದೇ ಗ್ಯಾಂಗ್ ನವಲೂರಿನಲ್ಲಿ ನಿನ್ನೆ ರಾತ್ರಿ ಮನೆಯೊಂದನ್ನು ದರೋಡೆ ಮಾಡಲು ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇಂದು ಮುಂಜಾನೆ ವಿದ್ಯಾಗಿರಿ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ.
ಆ ವೇಳೆ ಪಿಎಸ್ಐ ಪ್ರಮೋದ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪಿಎಸ್ಐ ಮಾತನ್ನು ಲೆಕ್ಕಿಸದೆ ಸಿಬ್ಬಂದಿ ಮೇಲೆ ಮತ್ತೆ ಹಲ್ಲೆ ನಡೆಸಲು ಮುಂದಾದಾಗ, ಆತರಕ್ಷಣೆಗಾಗಿ ಅವರು ಹಾರಿಸಿದ ಗುಂಡು ದರೋಡೆಕೋರ ಪಾಲಾ ವೆಂಕಟೇಶ್ವರ ರಾವ್ನ ಎರಡೂ ಕಾಲುಗಳಿಗೆ ತಗುಲಿದ್ದರಿಂದ ಕುಸಿದುಬಿದ್ದಿದ್ದಾನೆ.
ಆ ವೇಳೆ ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪಿಎಸ್ಐ ಪ್ರಮೋದ ಸೇರಿದಂತೆ ಪೊಲೀಸ್ ಕಾನ್ಸ್ ಟೇಬಲ್ಗೆ ಗಾಯವಾಗಿದೆ. ಕಮಿಷನರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ನಟೋರಿಯಸ್ ಚಡ್ಡಿ ಗ್ಯಾಂಗ್ ಕರ್ನಾಟಕದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.